ಸುಳ್ಯ: ಜೂ.13ರಂದು ಹಗಲು ಸುಳ್ಯ ನಗರದಲ್ಲಿ ಉತ್ತಮ ಮಳೆಯಾಗಿದೆ. 11.30ರ ಬಳಿಕ ಸುಮಾರು ಅರ್ಧ ಗಂಟೆಗೂ ಹೆಚ್ಚು ಉತ್ತಮ ಮಳೆ ಸುರಿದಿದೆ. ಮುಂಗಾರು ಬಲಗೊಳ್ಳುವ ನಿರೀಕ್ಷೆ ಉಂಟಾಗಿದ್ದು ಮಳೆ ಮುಂದುವರಿಯುವ ಸೂಚನೆ ಇದೆ. ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದರೂ ಉತ್ತಮ ಮಳೆ ಸುರಿದಿಲ್ಲ.ಹನಿ ಮಳೆಯಷ್ಟೇ
ಬರುತ್ತಿತ್ತು. ಜೂ.8ಕ್ಕೆ ಮುಂಗಾರು ಮಾರುತ ಕೇರಳ ಪ್ರವೇಶಿಸಿತ್ತು. ಜೂ.14ರ ವೇಳೆಗೆ ಮಳೆ ಬಿರುಸು ಪಡೆದುಕೊಳ್ಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಜೂ.10ರ ಬಳಿಕ ಕರ್ನಾಟಕದಲ್ಲಿಯೂ ಮುಂಗಾರು ವ್ಯಾಪಿಸಿದೆ. ಒಂದೆರಡು ದಿನದಲ್ಲಿ ಮುಂಗಾರು ಬಿರುಸುಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂಬ ಸೂಚನೆ ಇದೆ.
ಗುಜರಾತ್ನತ್ತ ಬಿಪರ್ಜಾಯ್:
ಬಿಪರ್ಜಾಯ್ ಚಂಡಮಾರುತ ಗುಜರಾತ್ನ ಕಚ್ ಕರಾವಳಿಯತ್ತ ಸಾಗುತ್ತಿದೆ. ಗುರುವಾರ ಸಂಜೆ ವೇಳೆಗೆ ಜಕೌ ಕರಾವಳಿಯನ್ನು ದಾಟಲಿದೆ. ಚಂಡಮಾರುತದ ಕರಾವಳಿ ದಾಟುವ ಸಮಯದಲ್ಲಿ ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ.
ಭಾರತ ಮತ್ತು ಪಾಕಿಸ್ತಾನದ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪ್ರಭಾವ ತೀವ್ರವಾಗಿರುತ್ತದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.