ಮಂಗಳೂರು:ರಾತ್ರಿಯಿಡೀ ನಗರ ಪ್ರದಕ್ಷಿಣೆ ಮಾಡಿದ ವೈಭವದ ಶೋಭಾಯಾತ್ರೆಯ ಬಳಿಕ ಶಾರದೆಯನ್ನು ಇಂದು ಬೆಳಿಗ್ಗೆ ಜಲಸ್ತಂಭನಗೊಳಿಸುವುದರೊಂದಿಗೆ ಮಂಗಳೂರು ದಸರಾ ಸಂಪನ್ನಗೊಂಡಿತು. ಶಾರದಾ ವಿಗ್ರಹಕ್ಕೆ ಕಲ್ಯಾಣಿಯ ಮಧ್ಯೆ ವಿವಿಧ ಬಗೆಯ ಅಭಿಷೇಕ ಮಾಡಲಾಯಿತು. ಗೋವಿಂದ ಹರಿ ಗೋವಿಂದ ಘೋಷಣೆ ಮುಗಿಲು ಮುಟ್ಟುತ್ತಿದ್ದಂತೆ ಶಾರದೆಯನ್ನು
ಜಲ ಸ್ತಂಭನಗೊಳಿಸಲಾಯಿತು.ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ ಹೊರಟ ದಸರಾದ ಶಾರದೆ ಹಾಗು ನವದುರ್ಗೆಯರ ವೈಭವದ ಶೋಭಾಯಾತ್ರೆಯನ್ನು ನಗರದಲ್ಲಿ ನೆರೆದ ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು. ಶ್ರೀಶಾರದೆ, ದೇವಿಯ ವಿವಿಧ ಅವತಾರಗಳನ್ನು ಬಿಂಬಿಸುವ ವಿಗ್ರಹಗಳು, ಮಹಾಗಣಪತಿ ಮೂರ್ತಿ ವಿದ್ಯುದ್ದೀಪಗಳಿಂದ ಅಲಂಕೃತವಾಗಿದ್ದ ರಥದಲ್ಲಿ ಒಂದರ ಹಿಂದೆ ಒಂದರಂತೆ ಸಾಗಿ ಬಂದಯ ಬೆಳಕಿನ ಅದ್ಭುತ ಲೋಕವೇ ಸೃಷ್ಟಿಯಾಗಿತ್ತು. ಈ ಮನಮೋಹಕ ದೃಶ್ಯ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತರು ಭಕ್ತಿ ಭಾವದಿಂದ ಕಣ್ತುಂಬಿಕೊಂಡರು.
ಶೋಭಾಯಾತ್ರೆಯಲ್ಲಿ ರಂಗು ರಂಗಿನ ಸ್ತಬ್ಧಚಿತ್ರಗಳು ಹಾಗೂ ಹುಲಿವೇಷ ತಂಡಗಳು ಪ್ರಮುಖ ಆಕರ್ಷಣೆಯಾಗಿತ್ತು. ಚೆಂಡೆ ವಾದನ, ಡೊಳ್ಳು ಕುಣಿತ, ವೀರಗಾಸೆ, ಬ್ಯಾಂಡ್ ವಾದನ ತಂಡಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದವು. ಲಕ್ಷಾಂತರ ಮಂದಿ ಉತ್ಸವದಲ್ಲಿ ಭಾಗಿಯಾದರು. ವಿದ್ಯುದ್ದೀಪಗಳಿಂದ ನಗರ ಝಗಮಗಿಸಿತ್ತು. ವೈಭವದ ದಸರಾ ಮೆರವಣಿಗೆಯನ್ನು ಆಸ್ವಾದಿಸಲು ಜನರು ಕಿಕ್ಕಿರಿದು ಸೇರಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಶ್ರೀ ಮಹಾ ಗಣಪತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ವರ್ಣ ರಂಜಿತ ಬ್ರಹತ್ ಶೋಭಾ ಯಾತ್ರೆ ನಗರದಲ್ಲಿ ಸಾಗಿ ಬಂದು ಕ್ಷೇತ್ರದ ಪುಷ್ಕರಣಿ ಯಲ್ಲಿ ಶಾರದಾ ಮಾತೆ, ನವ ದುರ್ಗೆಯರು ಹಾಗೂ ಮಹಾಗಣಪತಿ ಮೂರ್ತಿ ಜಲ ಸ್ತಂಭನಗೊಳ್ಳುವ ಮೂಲಕ ಸಂಪನ್ನಗೊಂಡಿತು.








