ಸುಳ್ಯ: ಇಲ್ಲಿ ಅನ್ನಭಾಗ್ಯ ಯೋಜನೆ ಜಾರಿ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸುತಿದೆ. ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆ ಅನುಷ್ಠಾನ ಮಾಡಲು ಮುಂದಾದಾಗ ರಾಜ್ಯಕ್ಕೆ ಅಕ್ಕಿ ನೀಡದೆ ಕೇಂದ್ರ ಸರಕಾರ ರಾಜಕೀಯ ದ್ವೇಷ ಸಾಧಿಸುತಿದೆ. ಈ ಮೂಲಕ ಬಿಜೆಪಿ ರಾಜಕೀಯ ಎಡೆಬಿಡೆಂಗಿತನ ತೋರ್ಪಡಿಸುತಿದೆ ಎಂದು
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಸುಳ್ಯ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಚಿತವಾಗಿ ಅಕ್ಕಿ ಬೇಡ, ಹಣ ನೀಡುತ್ತೇವೆ ಎಂದರೂ ಕೇಂದ್ರ ರಾಜ್ಯಕ್ಕೆ ಅಕ್ಕಿ ನೀಡುತ್ತಿಲ್ಲ. ಇದು ಯೋಜನೆಯನ್ನು ವಿಫಲಗೊಳಿಸುವ ಬಿಜೆಪಿಯ ಹುನ್ನಾರ.ಎಷ್ಟೇ ಕಷ್ಟ ಆದರೂ ಅನ್ಬ ಭಾಗ್ಯ ಯೋಜನೆಯನ್ನು ಸರಕಾರ ಜಾರಿ ಮಾಡಿಯೇ ಮಾಡುತ್ತದೆ ಎಂದು ಹೇಳಿದರು.
ಒಟ್ಟಾಗಿ ಪಕ್ಷ ಸಂಘಟನೆ:
ಸುಳ್ಯ ಹಾಗೂ ಕಡವ ಬ್ಲಾಕ್ ಕಾಂಗ್ರೆಸ್ ಮುಖಂಡರ ಅಮಾನತು ಹಾಗೂ ಕೆಲವು ನಾಯಕರಿಗೆ ಶೋಕಾಸ್ ನೋಟೀಸ್ ನೀಡಿರುವುದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವೆಂಕಪ್ಪ ಗೌಡರು. ಎಲ್ಲವೂ ಸರಿಯಾಗುತ್ತದೆ. ಎಲ್ಲವೂ ಸರಿಯಾಗಿ ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು. ಯಾರನ್ನೂ ದೂರ ಮಾಡುವುದು ಬೇಡ, ಪಕ್ಷಕ್ಕಾಗಿ ದುಡಿಯುವವರನ್ನು ದೂರ ಮಾಡುವ ಅಗತ್ಯ ಇಲ್ಲ. ಎಲ್ಲರನ್ನೂ ಒಟ್ಟು ಸೇರಿಸಿ ಪಕ್ಷ ಸಂಘಟನೆ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷರೇ ಸೂಚನೆ ನೀಡಿದ್ದಾರೆ. ಅದೇ ನಿಲುವನ್ನು ಎಲ್ಲರೂ ಪಾಲನೆ ಮಾಡಬೇಕು. ಬ್ಲಾಕ್ ಕಾಂಗ್ರೆಸ್ ಸಮಿತಿ ವಿಸರ್ಜನೆ ಮಾಡಿರುವುದು ಅಧ್ಯಕ್ಷರ ಅಧಿಕಾರ. ಸಮಿತಿ ಪುನರ್ ರಚನೆ ಮಾಡುವ ಸಂದರ್ಭದಲ್ಲಿ ಕೆಲಸ ಮಾಡುವವರಿಗೆ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಸುಳ್ಯಕ್ಕೆ ಸ್ಥಾನ ಮಾನ ನೀಡಬೇಕು:
ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಸುಳ್ಯಕ್ಕೆ ಅಧಿಕಾರದ ಸ್ಥಾನಮಾನಗಳನ್ನು ನೀಡಬೇಕು ಎಂದು ವೆಂಕಪ್ಪ ಗೌಡರು ಆಗ್ರಹಿಸಿದರು. ಪಕ್ಷಕ್ಕಾಗಿ ಕೆಲಸ ಮಾಡುವವರಿಗೆ ನಿಗಮದ ಅಧ್ಯಕ್ಷತೆ, ವಿವಿಧ ನಿಗಮಗಳಲ್ಲಿ ನಿರ್ದೇಶಕ ಸ್ಥಾನಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ, ಶರೀಫ್ ಕಂಠಿ, ಮುಖಂಡರಾದ ಕೆ.ಗೋಕುಲ್ದಾಸ್, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.