ನವದೆಹಲಿ: ಲೋಕಸಭೆಯ ಮೊದಲ ಹಂತದ ಚುನಾವಣೆ ಏ.19 ಶುಕ್ರವಾರ ನಡೆಯಲಿದ್ದು, 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಒಟ್ಟು 102 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಇದರ ಜೊತೆಗೆ ತಮಿಳುನಾಡಿನ ಎಲ್ಲಾ
39 ಲೋಕಸಭಾ ಕ್ಷೇತ್ರಗಳು, ರಾಜಸ್ಥಾನ (12/25), ಉತ್ತರ ಪ್ರದೇಶ (8/80), ಮಧ್ಯಪ್ರದೇಶ (6/29), ಮಹಾರಾಷ್ಟ್ರ (5/48), ಉತ್ತರಾಖಂಡ (5/5), ಅಸ್ಸಾಂ (5/14), ಬಿಹಾರ್ (4/40), ಪಶ್ಚಿಮ ಬಂಗಾಳ (3/42), ಅರುಣಾಚಲ ಪ್ರದೇಶ (2/2), ಮಣಿಪುರ (2/2), ಮೇಘಾಲಯ (2/2), ಛತ್ತೀಸ್ಘಡ (1/11), ಮಿಜೋರಾಂ (1/1), ನಾಗಾಲ್ಯಾಂಡ್ (1/1), ಸಿಕ್ಕಿಂ (1/1), ತ್ರಿಪುರ (1/2), ಜಮ್ಮು ಮತ್ತು ಕಾಶ್ಮೀರ (1/5), ಅಂಡಮಾನ್ ಮತ್ತು ನಿಕೋಬಾರ್ ದ್ವೀಪ (1/1), ಲಕ್ಷದ್ವೀಪ (1/1), ಪುದುಚೇರಿಯ ಒಂದು ಕ್ಷೇತ್ರದಲ್ಲಿ ಶುಕ್ರವಾರ ಮತದಾನ ನಡೆಯಲಿದೆ.102 ಕ್ಷೇತ್ರಗಳಲ್ಲಿ ಒಟ್ಟು 1625 ಮಂದಿ ಕಣದಲ್ಲಿದ್ದಾರೆ. ಈ ಪೈಕಿ ತಮಿಳುನಾಡು ರಾಜ್ಯವೊಂದರಲ್ಲೇ 950 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಎಸ್ಪಿ 86, ಬಿಜೆಪಿ 77 ಹಾಗೂ ಕಾಂಗ್ರೆಸ್ 56 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ,ಕಿರಣ್ ರಿಜಿಜು,ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ, ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ, ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ, ಚುನಾವಣಾ ರಾಜಕೀಯಕ್ಕೆ ಮರಳಿರುವ ಬಿಜೆಪಿ ನಾಯಕಿ ತಮಿಳು ಇಸೈ ಸುಂದರರಾಜನ್ ಚುನಾವಣಾ ಕಣದಲ್ಲಿರುವ ಪ್ರಮುಖರು. ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.