ಸುಳ್ಯ:ಶಾಸ್ತ್ರೀಯ ಭಾಷೆಯ ಸ್ಥಾನಮಾನ ಹೊಂದಿದ ಕನ್ನಡ ಭಾಷೆಯನ್ನು ವ್ಯಾಪಕವಾಗಿ ಬಳಸುವ, ಅದರ ಘನತೆಗೆ ಕುಂದುಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ. ಆಗಾದಾಗಲೇ ಕನ್ನಡ ಭಾಷೆ ಸಂಸ್ಕೃತಿ ಖಂಡಿತಾ ಸೋಲುವುದಿಲ್ಲ ಎಂದು ಅರಂತೋಡಿನಲ್ಲಿ ನಡೆದ ಸುಳ್ಯ ತಾಲೂಕು ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಲೀಲಾ ದಾಮೋದರ ಹೇಳಿದರು. ಕನ್ನಡ ಕಲಬೆರೆಕೆ ಇಲ್ಲದ ಭಾಷೆ, ಕ್ಲೀಷೆಯಿಲ್ಲದ ಸ್ಪಷ್ಟ ಉಚ್ಚಾರ, ಯಕ್ಷಗಾನ – ತಾಳಮದ್ದಳೆ ಕನ್ನಡ ಭಾಷೆಗೆ ದೊಡ್ಡ ಕೊಡುಗೆ ನೀಡಿದೆ. ದೇಹದ ಬೆಳವಣಿಗೆಗೆ
ಆಹಾರ ಬೇಕಾದಂತೆ ಮನಸ್ಸನ ಪ್ರವರ್ಧನೆಗೆ ಸಾಹಿತ್ಯ ಬೇಕು. ಸಾಹಿತ್ಯವಿಲ್ಲದೆ ಬದುಕಿಲ್ಲ, ಸಾಹಿತ್ಯವೂ ಇಲ್ಲ. ಉತ್ತಮ ಸಾಹಿತ್ಯ ಅರಳುವುದೇ ಬದುಕಿನಿಂದ. ಸಾಹಿತ್ಯದಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು. ಕನ್ನಡ ಭಾಷೆಯಲ್ಲೇ ಶಿಕ್ಷಣ ಪಡೆಯುವುದು ಕರ್ನಾಟಕದ ಪ್ರಗತಿಗೆ ಪೂರಕ ಆದರೆ ಜನರ ಏಳಿಗೆಗೆ ಪೂರಕವಾಗುತ್ತದೆ. ಅತ್ಯುನ್ನತ ವೈಜ್ಞಾನಿಕ, ತಾಂತ್ರಿಕ ಶಿಕ್ಷಣ ಪಡೆದ, ವಿದೇಶದಲ್ಲಿ ನೆಲೆಸಿದ, ವಿದೇಶಕ್ಕೆ ಹೋಗಿ ಬರುತ್ತಿರುವ ಯುವ ಸಮೂಹದಲ್ಲಿ ಭಾಷೆಯ ಬಗ್ಗೆ ಜಾಗೃತಿ ಮೂಡುತ್ತಿರುವುದು ಭರವಸೆ ಹುಟ್ಟಿಸುತ್ತದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕಾಗಿದ್ದು ಪೋಷಕರ ಕರ್ತವ್ಯ. ತಾವೂ ಓದುವುದರೊಂದಿಗೆ ಮಕ್ಕಳು ಓದಬಹುದಾದ ಪುಸ್ತಕಗಳನ್ನು ಅವರಿಗೆ ನೀಡಬೇಕು. ಭಾಷೆಯನ್ನು ಕಾಯ್ದುಕೊಳ್ಳುವ ಶಕ್ತಿಗಳಲ್ಲಿ ಪುಸ್ತಕಗಳಿಗೆ ಮಹತ್ವದ ಸ್ಥಾನವಿದೆ. ಮನೆಯಲ್ಲೊಂದು ಪುಟ್ಟ ಗ್ರಂಥಾಲಯವಿರಲಿ ಎಂದು ಸಲಹೆ ನೀಡಿದರು.
ನಮ್ಮ ನಾಡಿನ ಕೃಷಿಕರು ಹಲವು ಆತಂಕಗಳಿಗೆ ಕಾರಣವಾಗುತ್ತಿದ್ದಾರೆ ಈ ಆತಂಕಗಳಿಗೆ ಸ್ಪಂದನೆ ಸಿಗಬೇಕಾಗಿದೆ. ಸುಳ್ಯ ಭಾಗದ ಪ್ರಮುಖ ಬೆಳೆಯಾದ ಅಡಕೆ ಹಳದಿರೋಗಕ್ಕೆ ತುತ್ತಾಗಿ ದಶಕಗಳೆ ಸಂದಿದೆ. ಈ ರೋಗ ನಿವಾರಿಸುವಲ್ಲಿ ವಿಜ್ಞಾನಿಗಳು, ಸಂಶೋಧಕರ ಪ್ರಯತ್ನ ಅಗತ್ಯವಾಗಿದೆ ಎಂದರು.