ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ ನ.23ರಂದು ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯದ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಂಗಣದಲ್ಲಿ ನಡೆಯಲಿದೆ ಎಂದು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು
ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಮ್ಮೇಳನದ ವಿವರ ನೀಡಿದ
ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಕೇಶವ ಅಡ್ತಲೆ ಹಾಗೂ ಸಂತೋಷ್ ಕುತ್ತಮೊಟ್ಟೆ ಮಾತನಾಡಿ ಪೂರ್ವಾಹ್ನ 9 ಗಂಟೆಗೆ ಅರಂತೋಡು ಗ್ರಾಮ ಪಂಚಾಯತ್ ಕಚೇರಿ ಬಳಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ. ನಿವೃತ್ತ ಮುಖ್ಯ ಶಿಕ್ಷಕರಾದ ಹೊನ್ನಪ್ಪ ಮಾಸ್ತರ್ ಅಡ್ತಲೆ ಮೆರವಣಿಗೆಗೆ ಚಾಲನೆಯನ್ನು ನೀಡಲಿದ್ದಾರೆ. 9:30ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂಪಿ ಶ್ರೀನಾಥ್ ನೆರವೇರಿಸಲಿದ್ದಾರೆ.9:45 ಕ್ಕೆ ಪುಸ್ತಕ ಪ್ರದರ್ಶನದ ಉದ್ಘಾಟನೆಯನ್ನು ತಹಸಿಲ್ದಾರ್ ಮಂಜುಳಾ ನೆರವೇರಿಸಲಿದ್ದಾರೆ.
ಪೂ.10 ರಿಂದ ಹಿರಿಯ ಸಾಹಿತಿ ಲೀಲಾ ದಾಮೋದರ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮ್ಮೇಳನದ ಉದ್ಘಾಟನೆಯನ್ನು ಸಾಹಿತಿಗಳಾದ ನರೇಂದ್ರ ರೈ ದೇರ್ಲ ನೆರವೇರಿಸಲಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರತಥಿ ಮುರುಳ್ಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಾಜಿ ಹೊಸ ಕೃತಿಗಳ ಬಿಡುಗಡೆ ಗೊಳಿಸಲಿದ್ದಾರೆ. ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಕೆ.ಆರ್ ಗಂಗಾಧರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲ್ ಉಪಸ್ಥಿತರಿರುತ್ತಾರೆ.
27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಪ್ರಭಾಕರ್ ಶಿಶಿಲರ ಕುಂತಿ ಕಾದಂಬರಿ, ಕಲ್ಲುರ್ಟಿಯ ಕುಕ್ಕುಟ ಕಥನಗಳು ಎಂಬ ಕಥಾಸಂಕಲನ, ಲೀಲಾ ದಾಮೋದರ ಅವರ ನದಿಯ ನಾದ ಕವನ ಸಂಕಲನ
ಸಂಗೀತ ರವಿರಾಜ್ ಚೆಂಬು ಇವರ ಪಯಶ್ವಿನಿಯ ತೀರದಲ್ಲಿ ಲಲಿತ ಪ್ರಬಂಧ ಮತ್ತು ಅಕ್ಕರೆಯ ಕಡೆಗೋಲು ಎಂಬ ವಿಮರ್ಶ ನಾಟಕ, ಪ್ರಕಾಶ್ ಮೂಡಿತ್ತಾಯ ಅವರ ಲಸಿಕೆಯ ಕಥೆ ಮತ್ತು ಮೌಡ್ಯವೇಕೆ ಇನ್ನೂ ಎಂಬ ವಿಜ್ಞಾನ ನಾಟಕ, ನಿರೀಕ್ಷಾ ಸುಲಾಯ ಅವರ ನನ್ನ ಮನಸ್ಸು ನನ್ನ ಕನಸು ಎಂಬ ಕವನ ಸಂಕಲನ ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 12 ರಿಂದ 15 ಸಾಹಿತಿ ವಿಮಲಾರುಣ ಪಡ್ಡಂಬೈಲು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ಮಧ್ಯಾಹ್ನ 1:30 ರಿಂದ 2 ಗಂಟೆಯ ತನಕ ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮದ್ಯಾಹ್ನ 2.00 ರಿಂದ 3.00 ಗಂಟೆಯವರೆಗೆ ಸಾಹಿತಿ ನಂದಕುಮಾರ ಸ್ವಾಮಿ ಇವರ ಅಧ್ಯಕ್ಷತೆಯಲ್ಲಿ ನಿರಂಜನ ಶತಮಾನೋತ್ಸವ ಸ್ಮರಣೆ ವಿಚಾರಗೋಷ್ಠಿ ನಡೆಯಲಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಉಜಿರೆ ಇಲ್ಲಿಯ ಸಹಪ್ರಾಧ್ಯಾಪಕರಾದ ರಾಜಶೇಖರ ಹಳೆಮನೆ ನಿರಂಜನ ಬದುಕು ಬರಹ ಅವಲೋಕನ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 3 ರಿಂದ 4ರವರೆಗೆ ಕನ್ನಡ ಭಾಷೆ ಅನ್ನದ ಭಾಷೆ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳ ಚರ್ಚೆ ಗೋಷ್ಠಿ ನಡೆಯಲಿದೆ. ಬಳಿಕ ಗಾಯಕರಾದ ಕೆ.ಆರ್. ಗೋಪಾಲ ಕೃಷ್ಣ ಹಾಗೂ ಪೂರ್ಣಿಮಾ ಇವರಿಂದ ಗೀತ ಗಾಯನ ನಡಿಲಿದೆ. ಸಂಜೆ 4ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಹಾಗೂ ಕನ್ನಡ ಕಸ್ತೂರಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಮಾರೋಪ ಭಾಷಣವನ್ನು ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಧನಂಜಯ ಕುಂಬ್ಲೆ ನೆರವೇರಿಸಲಿದ್ದಾರೆ. ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಸಾಧಕನನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಜ್ಜನ ಪ್ರತಿಷ್ಠಾನ ಬೀಜದ ಕಟ್ಟೆ ಇದರ ಡಾ. ಉಮ್ಮರ್ ಬೀಜದಕಟ್ಟೆ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಡಾ. ಹರಪ್ರಸಾದ್ ತುದಿಯಡ್ಕ, ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶೀತಲ್ ಗೌಡ ಉಪಸ್ಥಿತರಿರುತ್ತಾರೆ.
ಸಂಜೆ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಡಾ. ಶ್ವೇತಾ ಮಡಪ್ಪಾಡಿ ಮತ್ತು ಬಳಗದವರಿಂದ ಭಾವಗಾನ ಕನ್ನಡ ಗೀತೆಗಳ ಗಾಯನ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲ ಬೈಲ್ ಸುಳ್ಯ ಇಲ್ಲಿನ ವಿದ್ಯಾರ್ಥಿಗಳಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಅರೆಭಾಷೆ ಸಿರಿ ಸಂಸ್ಕೃತಿ -ನೃತ್ಯ ರೂಪಕ ನಡೆಯಲಿದೆ. ಈ ಸಮ್ಮೇಳನದ ಯಶಸ್ವಿಗಾಗಿ ಸಮಿತಿ ಗಳನ್ನು ಉಪ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ ಎಂದು ಕೇಶವ ಅಡ್ತಲೆ ಹಾಗೂ ಸಂತೋಷ್ ಕುತ್ತಮೊಟ್ಟೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು, ಕಸಾಪ ಹಾಗೂ ಹೋಬಳಿ ಘಟಕಗಳ ಪದಾಧಿಕಾರಿಗಳಾದ ಚಂದ್ರಾವತಿ ಬಡ್ಡಡ್ಕ, ಬಾಬು ಗೌಡ, ಕೇಸವ ಮಾಸ್ತರ್ ಸಿಎ, ತೇಜಸ್ವಿ ಕಡಪಳ ಉಪಸ್ಥಿತರಿದ್ದರು.