*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ತಮ್ಮ ಜೀವನದಲ್ಲಿ ಸುಮಾರು 20 ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ್ದಾರೆ. ಇದರಲ್ಲಿ ಬಹುತೇಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ತಹಶೀಲ್ದಾರ್ ಹುದ್ದೆ ಸೇರಿ 12 ಸರಕಾರಿ ಇಲಾಖೆಗಳಲ್ಲಿ ಇವರಿಗೆ ಉದ್ಯೋಗ ದೊರಕಿತ್ತು. ಆದರೆ ಅದ್ಯಾವುದನ್ನೂ ಸ್ವೀಕರಿಸದೆ ಇವರು ಇಷ್ಟಪಟ್ಟು ಆಯ್ಕೆ ಮಾಡಿದ್ದು ಉಪನ್ಯಾಸಕ ವೃತ್ತಿಯನ್ನು. ಇವರೇ ಕಾಂತರಾಜು. ಸುಳ್ಯ ತಾಲೂಕಿನ ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ
ಕೇಂದ್ರದ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವು, ಸರಕಾರಿ ಉದ್ಯೋಗ ಎಂಬುದು ಪ್ರತಿಯೊಬ್ಬರ ಕನಸು. ಈ ಕನಸು ನನಸಾಗಿಸುವುದು ಸುಲಭ ಅಲ್ಲಾ.. ಹಾಗೆಂದು ಕಷ್ಟವೂ ಅಲ್ಲ. ಅಕ್ಷರದ ಹಸಿವು.. ಅನ್ನದ ಹಸಿವು ಇದ್ದವರಿಗೆ ಒಂದಿಷ್ಟು ಕಠಿಣ ಪ್ರಯತ್ನ ನಡೆಸಿದರೆ ಅದನ್ನು ಸುಲಭವಾಗಿ ಸಾಧಿಸಬಲ್ಲುದು ಎಂಬುದನ್ನು ಸಾಕ್ಷೀಕರಿಸುತ್ತದೆ ಕಾಂತರಾಜು ಅವರ ಬದುಕಿನ ಪಯಣ. ಸ್ಪರ್ಧಾತ್ಮಕ ಪರೀಕ್ಷೆಯ ಗೆಲುವು ಸಾಧಿಸಿ ಯಾವುದಾದರೂ ಒಂದು ಸರಕಾರಿ ಉದ್ಯೋಗ ಕನಸು ಕಾಣುವ ಯುವಕ ಯುವತಿಯರಿಗೆ ಇವರ ಅಧ್ಯಯನ, ಓದು ಮಾದರಿಯಾಗಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ನಿಡಗಲ್ಲಿನವರಾದ ಕಾಂತರಾಜು ಅವರು ಕಳೆದ 5 ವರ್ಷಗಳಿಂದ ಪೆರುವಾಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಬಿಎ,ಎಂಎಸ್ಡಬ್ಲ್ಯು, ಬಿಎಡ್ ಪದವಿ ಪಡೆದಿರುವ ಇವರು ಎದುರಿಸಿದ ಬಹುತೇಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರಕಾರಿ ಹುದ್ದೆ ಅರಸಿ ಬಂದಿತ್ತು. ಮೊದಲು ನ್ಯಾಯಾಂಗ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ, ಪ್ರಥಮ ದರ್ಜೆ ಗುಮಾಸ್ತರಾಗಿ ತಲಾ ಒಂದು ವರ್ಷ ಕೆಲಸ ಮಾಡಿದ್ದರು. ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಆಯ್ಕೆಯಾಗಿದ್ದರು. ಕೆಎಸ್ಆರ್ಟಿಸಿಯಲ್ಲಿ ಸೂಪರ್ ವೈಸರ್, ಟ್ರಾಫಿಕ್ ಇನ್ಸ್ಪೆಕ್ಟರ್ ಹುದ್ದೆ ಇವರನ್ನು ಅರಸಿ ಬಂದಿತ್ತು. ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರಾಗಿ ಆಯ್ಕೆಯಾಗಿ ಎಂಟು ವರ್ಷ ಕೆಲಸ ಮಾಡಿದ್ದಾರೆ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಈ ಮಧ್ಯೆ ಕೆಎಎಸ್ ಪರೀಕ್ಷೆ ಉತ್ತೀರ್ಣರಾಗಿ ತಹಶೀಲ್ದಾರ್ ತರಬೇತಿ ಪಡೆದಿದ್ದರು. ತನ್ನ ಎರಡನೇ ಪ್ರಯತ್ನದಲ್ಲಿ ಇವರು ಕೆಎಎಸ್ ಪರೀಕ್ಷೆ ಉತ್ತೀರ್ಣರಾಗಿದ್ದರು. ಆದರೆ ತಹಶೀಲ್ದಾರ್ ಹುದ್ದೆಗೆ ಸೇರದೆ ತನ್ನ ಪ್ರಯತ್ನ ಮುಂದುವರಿಸಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಆಯ್ಕೆಯಾದರು. ಕೊನೆಗೂ ತನ್ನ ಇಷ್ಟದ ಉಪನ್ಯಾಸಕ ಹುದ್ದೆಯನ್ನು ಆಯ್ಕೆ ಮಾಡಿ ಅವರು ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರೆಯುತ್ತಿದ್ದಾರೆ. ಶಿಕ್ಷಕನಾಗುವ ಆಸೆಯಿಂದ ಉಳಿದ ಎಲ್ಲಾ ಇಲಾಖೆಗಳ ಕೆಲಸವನ್ನು ಕೈ ಬಿಟ್ಟೆ ಎನ್ನುತ್ತಾರೆ ಕಾಂತರಾಜು. ತಾಲೂಕು ದಂಡಾಧಿಕಾರಿಯಾಗುವ ಅವಕಾಶ ಸಿಕ್ಕಿದರೂ ನೆಚ್ಚಿನ ಶಿಕ್ಷಕ ವೃತ್ತಿಯೆಡೆಗಿನ ಸೆಳೆತ ಉಪನ್ಯಾಸಕನಾಗಲು ಕಾರಣವಾಯಿತು.
ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಕಾಲೇಜು
ಕೈಹಿಡಿದ ಓದು:
ಕಾಂತರಾಜು ಅವರು ಹೇಳುವಂತೆ ಅನ್ನದ ಹಸಿವು ಮತ್ತು ಅಕ್ಷರದ ಹಸಿವು ಇವರನ್ನು ಕೈಹಿಡಿದು ವಿವಿಧ ಇಲಾಖೆಗಳ ಹುದ್ದೆಗೆ ಆಯ್ಕೆಯಾಗುವಂತೆ ಮಾಡಿತ್ತು. ಬದುಕಿಗೆ ಒಂದು ಉದ್ಯೋಗ ಅನಿವಾರ್ಯವಾಗಿತ್ತು. ಅದಕ್ಕಾಗಿ ನಿರಂತರ ಓದನ್ನು ಮುಂದುವರಿಸಲಾಯಿತು.
ಗ್ರಂಥಾಲಯಗಳ ಪುಸ್ತಕಗಳೇ ಮಾರ್ಗದರ್ಶಿಗಳಾಯಿತು. ಆ ಓದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವನ್ನು ತಂದು ಕೊಟ್ಟಿತು. ಆದುದರಿಂದ ಸ್ಪರ್ಧಾತ್ಮಕ ಪರೀಕ್ಷೆ ಉತ್ತೀರ್ಣರಾಗಲು ನಿರಂತರ ಓದು ಒಂದೇ ಅಸ್ತ್ರ ಎಂಬುದು ಕಾಂತರಾಜು ಅವರ ಅನುಭವದ ಮಾತು.
‘ಇನ್ನೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಹಂಬಲ ಇದೆಯಾ ಎಂದು ಕೇಳಿದರೆ, ಮನಸ್ಸಿದೆ ಆದರೆ ಪರೀಕ್ಷೆ ಬರೆಯುವ ಪ್ರಾಯ ಮೀರಿದೆ ಎ್ನುತ್ತಾರವರು.
ಪೆರುವಾಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಸೆಲ್:
ಶಿಕ್ಷಣದಲ್ಲಿ ಮುಂದಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರು ಇತರ ಜಿಲ್ಲೆಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಯುವಕ ಯುವತಿಯರು ಕಡಿಮೆ ಎಂದೇ ಹೇಳಬಹುದು. ಆದುದರಿಂದ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧರಾಗಿಸಲು ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಾಂಶುಪಲಾರಾದ ದಾಮೋದರ ಕಣಜಾಲು ಅವರು ಆಸಕ್ತಿ ವಹಿಸಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸೆಲ್ ತೆರೆಯಲಾಗಿದೆ. ತರಬೇತಿ ನೀಡಲು ಕಾಂತರಾಜು ಹಾಗು ಇತರ ಅಧ್ಯಾಪಕರ ತಂಡವನ್ನು ರಚಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಗೆಲುವು ಸಾಧಿಸಿದವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಈ ಹಿನ್ನಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಕ್ಕಳನ್ನು ಸಿದ್ಧಪಡಿಸುವ ಗುರಿ ಇದೆ ಎಂದು ದಾಮೋದರ ಕಣಜಾಲು ಹೇಳುತ್ತಾರೆ.