*ಪದ್ಮನಾಭ ಎಂ. ಸುಳ್ಯ.
ಸುಳ್ಯ: ಕೆಲವು ವರ್ಷಗಳ ಹಿಂದೆ ಕಾಸರಗೋಡು ಪ್ರಾಥಮಿಕ ಶಾಲೆ ಎಂಬ ಕನ್ನಡ ಚಲನ ಚಿತ್ರ ಬಂದಾಗ ಇಡೀ ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಬಗ್ಗೆ ದೊಡ್ಡ ಚರ್ಚೆ ನಡೆಯಲು ಕಾರಣವಾಗಿತ್ತು. ಇದೀಗ ಕೇರಳ, ಕರ್ನಾಟಕ ಗಡಿ ಅಂಚಿನಲ್ಲಿರುವ ಸರಕಾರಿ ಕನ್ನಡ ಶಾಲೆಯೊಂದು ತನ್ನ ಸಾಧನೆಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸುವ ಮೂಲಕ ಸದ್ದು ಮಾಡಿದೆ. ನಾಡಿನ ಶಿಕ್ಷಣ ಪ್ರೇಮಿಗಳ ಕಣ್ಣು, ಮನಸ್ಸು ಈ ಶಾಲೆಯತ್ತ
ಹೊರಳುವಂತೆ ಮಾಡಿದೆ. ಹೌದು ಇದು ಕರ್ನಾಟಕ-ಕೇರಳ ಗಡಿ ಭಾಗದ ಅಂಚಿನಲ್ಲಿರುವ ಕೋಲ್ಚಾರು ಸರಕಾರಿ ಪ್ರಾಥಮಿಕ ಶಾಲೆ.ರಾಜ್ಯದ ಅತ್ಯುತ್ತಮ ಸರಕಾರಿ ಪ್ರಾಥಮಿಕ ಶಾಲೆ ಎಂಬ ಪ್ರಶಸ್ತಿ ಪಡೆಯುವ ಮೂಲಕ ರಾಜ್ಯಕ್ಕೆ ಮಾದರಿಯಾಗಿ ಹೊರ ಹೊಮ್ಮಿದೆ ಶಾಲೆಯ ಸಾಧನೆ ನಾಡಿಗೆ ಹೆಮ್ಮೆ ತಂದಿದೆ.
ಶಿಕ್ಷಕರು, ಎಸ್ಡಿಎಂಸಿ, ಪೋಷಕರು, ಊರವರು ಕೈ ಜೊಡಿಸಿ ತಮ್ಮ ವಿದ್ಯಾ ದೇಗುಲದ ಅಭಿವೃದ್ಧಿಗಾಗಿ ಅಹೋ ರಾತ್ರಿ ದುಡಿದಾಗ ಶಾಲೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಿತು. ಕೋಲ್ಚಾರು ಪ್ರಾಥಮಿಕ ಶಾಲೆ ತನ್ನ ಶೈಕ್ಷಣಿಕ ಗುಣಮಟ್ಟ ಮತ್ತು ಮೂಲ ಸೌಕರ್ಯಗಳ ಕ್ಷೇತ್ರದಲ್ಲಿ ಯಾವುದೇ ಖಾಸಗೀ ಶಾಲೆಗೂ ಕಮ್ಮಿಯಿಲ್ಲ ಎಂಬ ಮಟ್ಟಕ್ಕೆ ಬೆಳೆದು ನಿಂತಿತು. ಶಾಲೆಯನ್ನು ಹೀಗೂ ಬೆಳೆಸಬಹುದು ಎಂಬ ಸಂದೇಶವನ್ನು ಕೊಟ್ಟಿತು.
1954 ಆರಂಭಗೊಂಡ ಶಾಲೆಗೆ 70 ವರ್ಷ ತುಂಬಿದೆ. 1 ರಿಂದ 7ನೇ ತರಗತಿವರೆಗೆ ಸುಮಾರು 115 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ವರ್ಷದ ಹಿಂದೆ 70 ಮಕ್ಕಳು ಇದ್ದ ಶಾಲೆಯಲ್ಲಿ ಈಗ ಮಕ್ಕಳ ಸಂಖ್ಯೆ 115ಕ್ಕೆ ಏರಿರುವುದು ಶಾಲೆಯ ಹಿರಿಮೆಗೆ ಸಾಕ್ಷಿಯಾಗಿದೆ. ಹಳ್ಳಿಗಳಿಂದ ಮಕ್ಕಳನ್ನು ಪೋಷಕರು ನಗರದ ಶಾಲೆಗೆ ಸೇರಿಸುತ್ತಾ ಇದ್ದರೆ, ಕೋಲ್ಚಾರ್ ಶಾಲೆಯ ಶಿಕ್ಷಣದ ಗುಣಮಟ್ಟ ಹಾಗೂ ಶೈಕ್ಷಣಿಕ ವಾತಾವರಣ ಮಕ್ಕಳನ್ನು ಪೋಷಕರನ್ನೂ ತಮ್ಮೂರ ಶಾಲೆಯತ್ತ ಆಕರ್ಷಿಸುತಿದೆ. ಇದೇ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಲು ಕಾರಣವಾಗುತಿದೆ.
ಇಂಗ್ಲೀಷ್ ಬೋಧನೆಗೂ ಆದ್ಯತೆ:
ಶಾಲೆಯಲ್ಲಿ 5 ಮಂದಿ ಶಿಕ್ಷಕರು ಮತ್ತು ಒಬ್ಬರು ಗೌರವ ಶಿಕ್ಷಕರಿದ್ದಾರೆ. ಕನ್ನಡ ಮಾಧ್ಯಮ ಶಾಲೆಯಾಗಿದ್ದರೂ ಸಂಜೆ 5 ಗಂಟೆಯಿಂದ 6 ಗಂಟೆವರೆಗೆ ಆಂಗ್ಲಭಾಷಾ ಕಲಿಕೆ ಮತ್ತು ಭಾಷಾ ನೈಪುಣ್ಯತೆ ಬಗ್ಗೆ ಕಲಿಸಲಾಗುತಿದೆ. ಕಲಿಕೆಗೆ ಪೂರಕವಾಗಿ ತರಗತಿಗಳಲ್ಲಿ ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತಿದೆ. ಇದರೊಂದಿಗೆ ಶಾಲಾ ನ್ಯೂಸ್ ಚಾನೆಲ್ ಇದ್ದು ಮಕ್ಕಳಿಗೆ ಪತ್ರಿಕೋದ್ಯಮದ ಪಾಠವೂ ಹೇಳಿಕೊಡಲಾಗುತ್ತಿದೆ.
ಆಕರ್ಷಕ ಶಾಲಾ ಪರಿಸರ:
ಸುತ್ತಲೂ ಹಸಿರು ಹೊದ್ದ ಸುಂದರ ಪ್ರಕೃತಿ, ಶಾಲಾ ಆವರಣದಲ್ಲಿಯೇ ನಳ ನಳಿಸುವ ಹಸಿರು, ಸುಂದರ ಕೈ ತೋಟ, ಆಕರ್ಷಕ ಶಾಲಾ ಕೊಠಡಿಗಳು, ಸ್ವಚ್ಛತೆ ಮನ ಸೆಳೆಯುತ್ತದೆ.ಶಾಲೆಯ ಹೆಸರಿನಲ್ಲಿ 6.20 ಎಕರೆ ಸ್ಥಳ ಇದೆ. 1.50 ಎಕರೆ ವ್ಯಾಪ್ತಿಯಲ್ಲಿ ಶಾಲಾ ಸಂಕೀರ್ಣವಿದೆ. ಶಾಲಾ ಆದಾಯಕ್ಕಾಗಿ 200 ಗೇರು ಗಿಡಗಳನ್ನು ಹಾಕಿ ಗೇರು ತೋಟವನ್ನು ಸಮುದಾಯದ ಸಹಕಾರದಿಂದ
ರೂಪಿಸಲಾಗಿದೆ. ಮಕ್ಕಳ ಪ್ರಾರ್ಥನೆಗೆ ಸುಸಜ್ಜಿತ ಸಭಾಭವನ, ಸುಸಜ್ಜಿತ ಮುಖ್ಯ ಶಿಕ್ಷಕರ ಕೊಠಡಿ, 8 ಉತ್ತಮ ಬೋಧನಾ ಕೊಠಡಿಗಳಿವೆ. ಎಂ ಆರ್ಪಿಎಲ್ನ ಸಿ.ಎಸ್ ಆರ್ ಫಂಡ್ 25 ಲಕ್ಷ ರೂ. ಬಳಸಿ ಮೂರು ಹೊಸ ಕೊಠಡಿಗಳು ನಿರ್ಮಾಣವಾಗುತಿದ್ದು ಕಾಮಗಾರಿ ಅಂತಿಮ ಹಂತದಲ್ಲಿವೆ. ಸುಸಜ್ಜಿತ ಗ್ರಂಥಾಲಯ, ನಲಿಕಲಿ ಕೊಠಡಿ, ಸ್ಮಾರ್ಟ್ ಕ್ಲಾಸ್, ಕ್ರೀಡಾ ಕೊಠಡಿ, ಸ್ಪೋಕನ್ ಇಂಗ್ಲೀಷ್ ಕ್ಲಾಸ್, ಅಕ್ಷರ ದಾಸೋಹ ಕೊಠಡಿ, ವಿಜ್ಞಾನ ಪ್ರಯೋಗಾಲಯ, ಎಂ.ಸಿ.ಎಫ್ನ ಸಿ.ಎಸ್.ಆರ್ ಫಂಡ್ನ ಮೂಲಕ 10ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಬಾಲಕರ ಹಾಗೂ ಬಾಲಕಿಯರ ಶೌಚಾಲಯ ಮತ್ತು ಸ್ನಾನ ಕೊಠಡಿಗಳನ್ನು ನಿರ್ಮಿಸಲಾಗಿದೆ.
ಪಠ್ಯೇತರ ಚಟುವಟಿಕೆಗೂ ಒತ್ತು:
ಪಠ್ಯದ ಜೊತೆಗೆ ಶಿಕ್ಷಕರು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಶಿಕ್ಷಕರು ನೀಡಿದ ಉತ್ತಮ ತರಬೇತಿಯ ಪರಿಣಾಮ ಮಕ್ಕಳು ಭಾಷಣ, ಪ್ರಬಂಧ, ರಸಪ್ರಶ್ನೆಯಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರತಿವರ್ಷ ಮೊರಾರ್ಜಿ ದೇಸಾಯಿ ಮತ್ತು ನವೋದಯ ಶಾಲೆಗಳಿವೆ ಕೋಲ್ಚಾರು ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಅಲ್ಲದೇ 2 ಬಾರಿ ಇನ್ಸ್ಪೈಯರ್ ಅವಾರ್ಡ್ ಗಳಿಸಿದೆ.
ಎಸ್ಡಿಎಂಸಿಯಿಂದ ಸ್ಕೂಲ್ ವ್ಯಾನ್ ಖರೀದಿ:
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಗರ ಪ್ರದೇಶದಂತೆ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ಶಾಲಾಭಿವೃದ್ದಿ ಸಮಿತಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಶಾಲಾ ವಾಹನವನ್ನು ಖರೀದಿ ಮಾಡಿದ್ದಾರೆ. 3.50 ಲಕ್ಷ ವೆಚ್ಚದಲ್ಲಿ ಮಾರುತಿ ಓಮ್ನಿ ವಾಹನವನ್ನು ಖರೀದಿ ಮಾಡಿ ಗ್ರಾಮೀಣ ಭಾಗದಿಂದ ಬರುವ ಮಕ್ಕಳನ್ನು ಶಾಲೆಗೆ ಕರೆ ತರಲಾಗುತಿದೆ. ಇದರಿಂದ ಮಕ್ಕಳಿಗೆ ಪ್ರಯಾಣದ ಪ್ರಯಾಸ ತಪ್ಪಿಸಿ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಅನುಕೂಲ ಮಾಡಿದೆ.ವಾಹನವನ್ನು ಶಾಲೆಯ ಸಹಶಿಕ್ಷಕಿ ಜಲಜಾಕ್ಷಿ ಅವರೇ ಮನೆಗಳಿಗೆ ಕೊಂಡೊಯ್ದು ಮಕ್ಕಳನ್ನು ಶಾಲೆಗೆ ಕರೆತರುತ್ತಿರುವುದು ಇಲ್ಲಿನ ವಿಶೇಷತೆ. ಶಾಲಾ ವಾಹನದ ಇರುವುದರಿಂರ ಮಕ್ಕಳು ಪ್ರತಿದಿನ ತರಗತಿಗೆ ಹಾಜರಾಗಲು ಸಹಾಯಕ ಮತ್ತು ಪೋಷಕರ ಟೆನ್ಷನ್ ಕೂಡ ತಪ್ಪಿದೆ. ಇದರಿಂದ ಶಾಲೆಗೆ ಮಕ್ಕಳನ್ನು ಹೆಚ್ಚು ಆಕರ್ಷಿಸಲು ಕಾರಣವಾಗಿದೆ.
ಅರಸಿ ಬಂದಿವೆ ಹಲವು ಪ್ರಶಸ್ತಿಗಳು :
ಸತತ ಮೂರು ವರ್ಷಗಳಿಂದ ಕೆ ವಿ ಜಿ ಸ್ವಚ್ಚತಾ ಪ್ರಥಮ ಪ್ರಶಸ್ತಿ ಕೋಲ್ಚಾರು ಶಾಲೆ ಪಡೆದುಕೊಂಡಿದೆ, ಸತತ ಮೂರು ವರ್ಷಗಳಿಂದ ತಾಲೂಕು ಮಟ್ಟದ ಹಸ್ತಪತ್ರಿಕೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದುಕೊಂಡಿದೆ. ಪ್ರತಿಭಾ ಕಾರಂಜಿಯಲ್ಲಿ ಸತತವಾಗಿ ಮೂರು ವರ್ಷ ಪ್ರಥಮ ಪ್ರಶಸ್ತಿ, ಹಾಗೆಯೇ ಶಿಕ್ಷಕರಿಗೆ ರೋಟರಿ ಪ್ರಶಸ್ತಿ, ವೈದ್ಯಕೀಯ ಸಂಘದ ಪ್ರಶಸ್ತಿ, ತಾಲೂಕು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
20ಲಕ್ಷಕ್ಕೂ ಹೆಚ್ಚು ಅನುದಾನ ತರಿಸಿದ ಶಿಕ್ಷಕಿ :
ಶಾಲೆಯ ಸಮಗ್ರ ಅಭಿವೃದ್ದಿಯಲ್ಲಿ ಶಿಕ್ಷಕಿ ಜಲಜಾಕ್ಷಿ ಅವರ ಪಾತ್ರ ಮಹತ್ವದು. ಕಳೆದ 8 ವರ್ಷಗಳಿಂದ ವಿವಿಧ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ತನ್ನ ಸ್ವಂತ ಪರಿಶ್ರಮದಿಂದ ಸುಮಾರು 20 ಲಕ್ಷ ಅನುದಾನವನ್ನು ಶಾಲೆಗೆ ತರಿಸಿಕೊಂಡಿದ್ದಾರೆ. ಕೋಲಾರದ ಶಿಕ್ಷಕರ ಗೆಳೆಯರ ಬಳಗ, ಅಮೃತ ಬಿಂದು, ನಗು ಫೌಂಡೇಷನ್, ಸುಂದರ್ ಭಾರತ್, ರೋಟರಿ ಕ್ಲಬ್, ಐಎಂಎ ಸುಳ್ಯ ಘಟಕ, ಕನ್ನಡ ಮನಸ್ಸುಗಳು ಮುಂತಾದ ಸಂಘಸಂಸ್ಥೆಗಳಿಂದ ಸ್ಮಾರ್ಟ್ ಕ್ಲಾಸ್, ಸೈನ್ಸ್ ಲ್ಯಾಬ್, ಗ್ರಂಥಾಲಯ, ಫರ್ನಿಚರ್, ಕಂಪ್ಯೂಟರ್, ಪುಸ್ತಕ, ಬ್ಯಾಗ್, ಕೊಡೆ, ಪ್ರೀಂಟರ್, ಕೈ ತೊಳೆಯುವ ಬೆಸಿನ್, ಕಲಿಕಾ ಉಪಕರಣಗಳು, ರ್ಯಾಕ್, ಕ್ರೀಡಾ ಸಲಕರಣೆಗಳು, ಊಟದ ತಟ್ಟೆ, ತಟ್ಟೆ ಇಡುವ ಸ್ಟಾಂಡ್ಗಳನ್ನು ಒದಗಿಸಿಕೊಟ್ಟಿದ್ದಾರೆ. ಅಲ್ಲದೇ ಶಿಕ್ಷಕಿ ತನ್ನ ವೇತನದಿಂದಲೇ ಸುಮಾರು 1.60 ಲಕ್ಷ ಶಾಲೆಯ ಅಭಿವೃದ್ದಿಗೆ ವಿನಿಯೋಗಿಸಿದ್ದಾರೆ. ಇನ್ನೋರ್ವ ಶಿಕ್ಷಕಿ ಮಮತಾ ಅವರು ತನ್ನ ವೇತನದಿಂದಲೇ ನಲಿಕಲಿ ಕೊಠಡಿ ನವೀಕರಣ ಮಾಡಿ ಅದಕ್ಕೆ ಬೇಕಾಗುವ ಸಲಕರಣೆಗಳನ್ನು ತಂದು ಹಾಕಿದ್ದಾರೆ.
ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿ :
2024-25ನೇ ಸಾಲಿನ ಮಾಜಿ ಶಿಕ್ಷಣ ಸಚಿವರಾದ ಹೆಚ್.ಜಿ. ಗೋವಿಂದೇ ಗೌಡ ಇವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆಯಂದು ಕೊಡಮಾಡುವ ಅತ್ಯುತ್ತಮ ಕನ್ನಡ ಸರಕಾರಿ ಪ್ರಾಥಮಿಕ ಶಾಲಾ ಪ್ರಶಸ್ತಿ ಕೋಲ್ಚಾರು ಪ್ರಾಥಮಿಕ ಶಾಲೆಗೆ ಒದಗಿದೆ. ಶಿಕ್ಷಕರ ದಿನದಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ಸಮ್ಮುಖದಲ್ಲಿ ಪ್ರದಾನ ನಡೆಯಿತು. ಆ ಮೂಲಕ ಗ್ರಾಮೀಣ ಪ್ರದೇಶದ ಗಡಿ ಶಾಲೆ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಇಡೀ ನಾಡಿಗೆ ಹೆಮ್ಮೆ ತಂದಿದೆ.
‘ಇಂದಿನ ಮಕ್ಕಳ ಭೌದ್ದಿಕ ಮಟ್ಟದ ಅಭಿವೃದ್ದಿಗೆ ತಂತ್ರಜ್ಞಾನಗಳು ಅಗತ್ಯ. ಇದಕ್ಕಾಗಿ ಕಂಪ್ಯೂಟರ್, ಲ್ಯಾಬ್, ಕಲಿಕಾ ಸಲಕರಣೆಗಳು ಬೇಕು. ಶಾಲೆ ಮತ್ತು ಶಾಲೆಯ ವಾತಾವರಣ ಆಕರ್ಷಕವಾಗಿದ್ದರೆ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುತ್ತದೆ. ಶಾಲೆ ಅಂದ ಮೇಲೆ ಕನಿಷ್ಠ ಸೌಲಭ್ಯಗಳು ಇರಲೆಬೇಕು.
ಜಲಜಾಕ್ಷಿ, ಸಹಶಿಕ್ಷಕಿ, ಕೋಲ್ಚಾರು ಶಾಲೆ.
‘ಅನುಭವಿ ಶಿಕ್ಷಕರ ತಂಡ, ಉತ್ತಮ ಸಹಕಾರ ನೀಡುವ ಎಸ್ಡಿಎಂಸಿ, ಪೋಷಕರೊಂದಿಗೆ ಉತ್ತಮ ಸಂವಹನ ಸೌಹಾರ್ದತೆಯಿಂದ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಹೆಚ್ಚಾಗುತ್ತದೆ. ಸಂಘ ಸಂಸ್ಥೆ, ದಾನಿಗಳು, ಪೋಷಕರು ಶಾಲೆಯ ಅಭಿವೃದ್ದಿಗೆ ಮತ್ತು ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಸಂತಸ ತಂದಿದೆ. ಪ್ರತಿದಿನ ಎಸ್ಡಿಎಂಸಿ ಸದಸ್ಯರು ಶಾಲೆಗೆ ಬಂದು ಸಂಪೂರ್ಣ ಸಹಕಾರ ನೀಡುತ್ತಾರೆ.
ಚಿನ್ನಸ್ವಾಮಿ ಶೆಟ್ಟಿ, ಮುಖ್ಯ ಶಿಕ್ಷಕರು, ಕೋಲ್ಚಾರು.
‘ಶಾಲೆಯ ಸಮಗ್ರ ಅಭಿವೃದ್ದಿಯಲ್ಲಿ ಸಮುದಾಯದ ಪಾತ್ರ ಅನನ್ಯ. ಊರವರಿಂದ ಸುಮಾರು 12 ಲಕ್ಷ ಸಂಗ್ರಹ ಮಾಡಿ ಶಾಲೆಯ ಅಭಿವೃದ್ದಿ ಮಾಡಲಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಕರಿದ್ದಾರೆ. ಎಸ್ಡಿಎಂಸಿ ಶಾಲೆಯ ಮೂಲಭೂತ ಸೌಕರ್ಯಕ್ಕೆ ಗಮನಕೊಟ್ಟು ಕೆಲಸ ಮಾಡಿದೆ. ಶಾಲೆಯ 2 ಕೊಠಡಿ, ಶಾಲೆಯ ಸುತ್ತ ಕೌಂಪೌಂಡು, ಕುಡಿಯುವ ನೀರಿಗೆ ಬೋರ್ವೆಲ್ನ ಅಗತ್ಯ ಇದೆ.
ಸುದರ್ಶನ ಪಾತಿಕಲ್ಲು, ಎಸ್ಡಿಎಂಸಿ ಅಧ್ಯಕ್ಷರು.