ಸುಳ್ಯ: ಸಂಸ್ಕೃತ ಮತ್ತು ಸಂಸ್ಕೃತಿ ಜಗತ್ತಿಗೆ ಭಾರತದ ಕೊಡುಗೆ. ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆಯನ್ನು ಉಳಿಸಬೇಕಾದ ಅನಿವಾರ್ಯತೆ ಇದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.ಸುಳ್ಯ ಹಳೆಗೇಟಿನ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ನಡೆದ 24 ನೇ ವರ್ಷದ ಶ್ರೀ ಕೇಶವಕೃಪಾ ವೇದ-ಯೋಗ- ಕಲಾ ಶಿಬಿರದ ಸಮಾರೋಪ ಹಾಗೂ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿ ಪಾಶ್ಚಿಮಾತ್ಯರಿಗೆ ಬೇಕು ಅಂತ ಅನ್ನಿಸುವಾಗ ನಾವು
ಮಾತ್ರ ಪಾಶ್ಚಾತ್ಯ ಸಂಸ್ಕೃತಿ ಕಡೆಗೆ ವಾಲುತ್ತಿರುವುದು ದುರಂತ. ಇದರಿಂದ ಮುಕ್ತಿ ಪಡೆಯಲು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಜೀವನದಲ್ಲಿ ಅನುಷ್ಠಾನ ಮಾಡಬೇಕು. ಭಾರತೀಯ ಸಂಸ್ಕೃತಿಯಲ್ಲಿ ನೆಮ್ಮದಿ ಇದೆ. ಪಾಶ್ಚಾತ್ಯ ಸಂಸ್ಕೃತಿ ಆಚಾರ ವಿಚಾರದಲ್ಲಿ ನೆಮ್ಮದಿ ಸಿಗುವುದಿಲ್ಲ.ಅದು ಕೇವಲ ತಾತ್ಕಾಲಿಕ ಸಂತೋಷ ಅಸ್ಟೇ. ಆದುದರಿಂದ ನಮ್ಮ ಸಂಸ್ಕೃತಿ ಉಳಿಸಬೇಕಾದ ಅಗತ್ಯತೆ ಇದೆ. ಮಕ್ಕಳಲ್ಲಿ ಕಾಲ ಕಾಲಕ್ಕೆ ಸಂಸ್ಕಾರ ನೀಡಿದರೆ ಮೇರು ವ್ಯಕ್ತಿತ್ವ ಮತ್ತು ಸುಂದರ ಬದುಕು ಸಿಗಲು ಸಾಧ್ಯ ಎಂದ ಅವರು ವೇದ, ಕಲೆ, ಸಂಗೀತ ಬದುಕಿಗೆ ಸಂತಸ ಮತ್ತು ರಕ್ಷಣೆ ನೀಡುತ್ತದೆ. ಮಕ್ಕಳನ್ನು ಪಡೆಯುವುದು ಎಷ್ಟು ಮುಖ್ಯವೋ ಅವರನ್ನು ಸಂಸ್ಕಾರಯುತ ವ್ಯಕ್ತಿಗಳಾಗಿ ರೂಪಿಸುವುದು ಕೂಡ ನಮ್ಮ ಬದ್ಧತೆಯಾಗಿದೆ ಎಂದರು. ವೇದ ಶಿಬಿರದಲ್ಲಿ ಕಲಿತ ವಿದ್ಯೆಗಳು ಯಾವತ್ತೂ ಔಟ್ ಆಫ್ ಸಿಲಬಸ್ ಆಗುವುದಿಲ್ಲ. ಭಾರತೀಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಾಗರಾಜ ಭಟ್ – ಶ್ರೀದೇವಿ ದಂಪತಿಗಳ ಕೊಡುಗೆ ಬಹಳ ದೊಡ್ಡದು ಎಂದು ಅವರು ಬಣ್ಣಿಸಿದರು.

ಕೇಶವ ಕಿರಣ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅಭಿನಂದನೆ ಹಾಗೂ ಸಮಾರೋಪ ಭಾಷಣ ಮಾಡಿದ ಖ್ಯಾತ ಯಕ್ಷಗಾನ ಅರ್ಥದಾರಿ ಉಜಿರೆ ಅಶೋಕ ಭಟ್ ‘ವೇದ ಇಲ್ಲದೆ ಜಗತ್ತಿಗೆ ಅಸ್ತಿತ್ವ ಇಲ್ಲ. ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದ ವೇದಗಳು ಎಲ್ಲದಕ್ಕೂ ಆಧಾರ ಎಂದು ಹೇಳಿದರು. ಮನುಷ್ಯನನ್ನು ಸುಸಂಸ್ಕೃತರನ್ನಾಗಿ ಮಾಡಲು ವೇದಗಳು ಸಹಾಯಕ. ಈ ರೀತಿಯ ಶಿಬಿರಗಳು ಸಂಸ್ಕಾರಯುತ ಮಕ್ಕಳನ್ನು ರೂಪಿಸುತ್ತದೆ.
ವೇದಗಳು ಭಾರತದ ಆತ್ಮ, ಭಾರತ ಜಗತ್ತಿನ ಅತ್ಮ. ಭಾರತದ ಸಂಸ್ಕೃತಿ, ಅಚಾರಗಳು ಶ್ರೇಷ್ಠ ಮತ್ತು ಅನನ್ಯವಾದುದು ಎಂದು ಹೇಳಿದರು. ಭಾರತದ ಆತ್ಮವನ್ನು ಶಸಕ್ತವನ್ನಾಗಿಸುವ ಕೆಲಸ ಕೇಶವ ಕೃಪಾ ಶಿಬಿರದಲ್ಲಿ ನಡೆಯುತ್ತಿದೆ ಎಂದು ಅಶೋಕ ಭಟ್ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಳ್ಯದ ಶ್ರೀ ರಾಘವೇಂದ್ರ ಮಠದ ಅಧ್ಯಕ್ಷರಾದ ಎಂ.ಎನ್. ಶ್ರೀಕೃಷ್ಣ ಸೋಮಯಾಗಿ ಮಾತನಾಡಿ ‘ ‘ ‘ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸಿ ಪೋಷಿಸುವುದರಲ್ಲಿ ನಾಗರಾಜ ಭಟ್ ಅವರ ಸೇವೆ ಅನನ್ಯವಾದುದು. ಸಂಸ್ಕಾರ, ಸಂಸ್ಕೃತಿ ಬೇಳೆಸುವುದರ ಜೊತೆಗೆ ಸಮಾಜದ ಆಗು ಹೋಗುಗಳಿಗೆ ನಿರಂತರ ಸ್ಪಂದಿಸುವ ಅವರು ತಾನು ಪಡೆದುದನ್ನು ಸಮಾಜಕ್ಕೆ ಧಾರೆ ಎರೆಯುತ್ತಾರೆ ಎಂದರು.

ಪ್ರತಿಷ್ಠಾನದ ವತಿಯಿಂದ ನೀಡುವ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದ್ವೇಶ ಡಾ. ಮುರಳಿ ಮೋಹನ ಚೂಂತಾರು
ಮಾತನಾಡಿ ‘ನಾಗರಾಜ ಭಟ್ ನೇತೃತ್ವದಲ್ಲಿ ನಡೆಯುವ ಶಿಬಿರದ ಮೂಲಕ ನಮ್ಮ ಕಲಾ ಸಾಂಸ್ಕೃತಿಕ ಜಗತ್ತನ್ನು ಉಳಿಸುವ ಕೆಲಸ ಆಗುತಿದೆ ಎಂದು ಹೇಳಿದರು. ಇಂದು ವ್ಯಾಪಾರೀಕರಣ ಆಗದ ಬದುಕಿನ ಶಿಕ್ಷಣ, ಸಂಸ್ಕೃತಿಯ ಶಿಕ್ಷಣ ನೀಡುವ ಅಗತ್ಯ ಇದೆ ಎಂದು ಹೇಳಿದರು.

ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ:
ವೇದ, ಯೋಗ ಹಾಗೂ ಕಲಾ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ
ಪ್ರತಿಷ್ಠಾನದ ವತಿಯಿಂದ ನೀಡುವ ಕೇಶವ ಸ್ಮೃತಿ ಪ್ರಶಸ್ತಿ ಪುರಸ್ಕಾರವನ್ನು ಸಮಾರಂಭದಲ್ಲಿ ಪ್ತದಾನ ಮಾಡಲಾಯಿತು.
ವೇದ ವಿದ್ವಾಂಸರಾದ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಕಾರಂತ ಅವರಿಗೆ ವೇದ ಸ್ಮೃತಿ,ಯೋಗ ಶಿಕ್ಷಕರಾದ ಸಂತೋಷ್ ಮುಂಡಕಜೆ ಅವರಿಗೆ ಯೋಗ ಸ್ಮೃತಿ ಹಾಗೂ ಸಂಗೀತ ಶಿಕ್ಷಕಿ ರೇಖಾ ರೇವತಿ ಹೊನ್ನಾಡಿ ಅವರಿಗೆ ಕಲಾ ಸ್ಮೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸುಬ್ರಹ್ಮಣ್ಯ ಕಾರಂತ
ಸರ್ವ ಪ್ರಥಮ, ಪ್ರತಿಭಾ ಪುರಸ್ಕಾರ:
ಶಿಬಿರದ ವಿದ್ಯಾರ್ಥಿಗಳನ್ನು ಸರ್ವ ಪ್ರಥಮ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ಷಿತೀಶ ರಾಮ, ವಿನ್ಯಾಸ ಎಂ.ಆರ್, ಆಪ್ತ ಕೃಷ್ಣ ಶಾಸ್ತ್ರೀ ಅವರಿಗೆ ಸರ್ವ ಪ್ರಥಮ ಪುರಸ್ಕಾರ ನೀಡಲಾಯಿತು. ಸವಿತ್ರ ಶರ್ಮ, ಅಪ್ರಮೇಯ ಆರ್.ಯು, ಕೃಷ್ಣಕಿಶೋರ ಭಾರದ್ವಾಜ್, ಓಂಕಾರ ಗೋರೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ರೇಖಾ ರೇವತಿ ಹೊನ್ನಾಡಿ
ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್, ಗೌರವಾಧ್ಯಕ್ಷ ಎಂ.ಗೋಪಾಲಕೃಷ್ಣ ವಗೆನಾಡು, ಶ್ರೀದೇವಿ ನಾಗರಾಜ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದ ಸಂಚಾಲಕ ಅಭಿರಾಮ ಭಟ್ ಸರಳಿಕುಂಜ ಮತ್ತು ಬಳಗ ವೈದಿಕ ಮಂತ್ರ ಜಪಿಸಿದರು. ಶಿಬಿರದ ಗುರುಗಳಾದ ಸುದರ್ಶನ ಭಟ್ ಉಜಿರೆ ಸ್ವಾಗತಿಸಿ, ಪುರುಷೋತ್ತಮ ಭಟ್ ವಂದಿಸಿದರು. ಅಕ್ಷತಾ ಹಳೆಗೇಟು ಕಾರ್ಯಕ್ರಮ ನಿರೂಪಿಸಿದರು.

ಸಂತೋಷ್ ಮುಂಡಕಜೆ
24 ವರ್ಷಗಳಿಂದ ವೇದ ಶಿಬಿರ ನಡೆಯುತ್ತಿದ್ದು ಏ.21ರಿಂದ ಆರಂಭಗೊಂಡ ಶಿಬಿರ ಮೇ.19ರಂದು ಸಮಾಪನಗೊಂಡಿತು.
ಕರ್ನಾಟಕ, ಕೇರಳ ಸೇರಿ ವಿವಿಧ ರಾಜ್ಯಗಳಿಂದ ಆಗಮಿಸಿದ ಶಿಬಿರದಲ್ಲಿ 207 ಮಂದಿ ವಿದ್ಯಾರ್ಥಿಗಳು ಈ ವರ್ಷದ ಶಿಬಿರದಲ್ಲಿ ಭಾಗವಹಿಸಿದ್ದರು.
ತಿಂಗಳ ಕಾಲ ನಡೆದ ಉಚಿತ ಶಿಬಿರದಲ್ಲಿ ವೇದಾಧ್ಯಯನ- ಯೋಗಾಭ್ಯಾಸದೊಂದಿಗೆ ರಂಗಪಾಠ, ಮೂಕಾಭಿನಯ, ಬಣ್ಣದ ಹೂಗಳು, ಆರೋಗ್ಯ ಮಾಹಿತಿ, ಯಕ್ಷಗಾನ, ರಂಗಗೀತೆಗಳು, ಶ್ರೀ ಪೂಜಾ ಪ್ರಯೋಗ ಪಾಠ ಪ್ರಾತ್ಯಕ್ಷಿಕೆ, ರಂಗಾಭಿನಯ, ಮುಖವಾಡ, ಭಜನೆ, ಈಜು ತರಬೇತಿ, ಜಾದೂ, ವ್ಯಂಗ್ಯ ಚಿತ್ರ,ಗೊಂಬೆ ತಯಾರಿ, ಜಾನಪದ ನೃತ್ಯ, ಪೋಲೀಸ್ ಮಾಹಿತಿ,ನಾಟಕ, ಮಿಮಿಕ್ರಿ ಚಿತ್ರಕಲೆ, ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಕಸದಿಂದ ರಸ, ಹಾವು ನಾವು ಪರಿಸರ ಪ್ರಾತ್ಯಕ್ಷಿಕೆ, ಹಾಡು-ಕುಣಿತ,
ಗೀತ-ಗಾನ-ಸಾಹಿತ್ಯ ಹೀಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲಾ ಶಿಬಿರಾರ್ಥಿಗಳಿಗೆ ಉಚಿತ ವಸತಿ, ಊಟ, ಉತ್ತರೀಯ, ವಸ್ತ್ರ, ಪುಸ್ತಕಗಳನ್ನು ನೀಡಲಾಗಿತ್ತು.