ತಿರುವನಂತಪುರಂ: ಇಡುಕ್ಕಿ, ಎರ್ನಾಕುಲಂ, ಕೋಯಿಕ್ಕೋಡ್, ಕಣ್ಣೂರು, ಕಾಸರಗೋಡು, ತ್ರಿಶೂರ್ ಸೇರಿದಂತೆ ಕೇರಳದ 10 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಚಂಡಮಾರುತದ
ಕಾರಣದಿಂದ ಜೋರಾದ ಗಾಳಿ ಬೀಸಲಿದೆ ಎಂದು ಐಎಂಡಿ ಮೂಲಗಳು ತಿಳಿಸಿವೆ. ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ.
ಈ ಮಧ್ಯೆ ದ.ಕ. ಜಿಲ್ಲೆ ಸೇರಿದಂತೆ ಕರಾವಳಿಯಾದ್ಯಂತ ಮಳೆ ಮುಂದುವರಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿದಿದೆ. ಅರಬ್ಬಿ ಸಮುದ್ರದಲ್ಲಿ ಕಡಿಮೆ ವಾಯುಭಾರ ಕುಸಿತದಿಂದಾಗಿ ಈ ರೀತಿಯ ಮಳೆಯಾಗುತ್ತಿದ್ದು, ಇದು ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯು ನೀಡಿದ ಹವಾಮಾನ ಮುನ್ಸೂಚನೆಯಂತೆ ಸೆ.29ರಿಂದ ಅಕ್ಟೋಬರ್ 2ರ ವರೆಗೆ ಅರಬ್ಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿದ್ದು, ಚಂಡ ಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.