ತಲಕಾವೇರಿ: ಬ್ರಹ್ಮಗಿರಿ ತಪ್ಪಲಿನಲ್ಲಿರುವ ತಲಕಾವೇರಿ ಕ್ಷೇತ್ರದಲ್ಲಿ ನಾಡಿನ ಜೀವನದಿ ಕಾವೇರಿ ತೀರ್ಥೋದ್ಭವ ಸಂಭ್ರಮ.ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕರ್ಕಾಟಕ ಲಗ್ನದಲ್ಲಿ 1 ಗಂಟೆ 26 ನಿಮಿಷಕ್ಕೆ ಸರಿಯಾಗಿ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಆವೀರ್ಭವಿಸಿದಳು.ಮಾತೆ ಕಾವೇರಿಯ ತೀರ್ಥಸ್ವರೂಪವನ್ನು ಕಂಡ ಭಕ್ತರು ಧನ್ಯತಾ ಭಾವ ತಳೆದರು. ಜೈ ಜೈ ಮಾತಾ ಕಾವೇರಿ ಮಾತಾ ಎಂಬ
ಹರ್ಷೋದ್ಗಾರದೊಂದಿಗೆ ಕಾವೇರಿ ತೀರ್ಥೋದ್ಭವವನ್ನು ತಲಕಾವೇರಿ ಕ್ಷೇತ್ರದಲ್ಲಿ ಸೇರಿದ್ದ ಸಾವಿರಾರು ಭಕ್ತರು ವೀಕ್ಷಿಸಿ ಪುನೀತರಾದರು. ತೀರ್ಥೋದ್ಭವ ನೆರವೇರುತ್ತಿದ್ದಂತೆಯೇ ಅರ್ಚಕರು ಪವಿತ್ರ ತೀರ್ಥವನ್ನು ಭಕ್ತಾಧಿಗಳ ಮೇಲೆ ಪ್ರೋಕ್ಷಣೆ ಮಾಡಿದರು.ಕವಿದ ದಟ್ಟ ಮಂಜು ಮತ್ತು ಕೊರೆವ ಚಳಿಯನ್ನು ಲೆಕ್ಕಿಸದೆ ಸಾವಿರಾರು ಮಂದಿ ತೀರ್ಥೋದ್ಭವ ದರ್ಶನಕ್ಕೆ ಆಗಮಿಸಿದ್ದರು. ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯ ಭಕ್ತರು ಪುಣ್ಯ ತೀರ್ಥ ಸ್ವೀಕರಿಸಿದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜ್, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ವೆಂಕಟರಾಜ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು. ಸಿನಿಮಾ ರಂಗದ ನವ ಜೋಡಿ ಭುವನ್ ಪೊನ್ನಣ್ಣ,ವಹರ್ಷಿಕಾ ಪೂಣಚ್ಚ ಕೂಡ ಹಾಜರಿದ್ದರು.
ಕಾವೇರಿ ತೀರ್ಥೋದ್ಭವಕ್ಕೆ ಕೊಡಗಿನ ವಿವಿಧೆಡೆಗಳಿಂದ ನಡುರಾತ್ರಿಯ ಕೊರೆಯುವ ಚಳಿಯಲ್ಲಿಯೂ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಜಿಲ್ಲಾಡಳಿತದ ವತಿಯಿಂದ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಭಾಗಮಂಡಲದಿಂದ ತಲಕಾವೇರಿಗೆ ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಅಂತೆಯೇ ಸರ್ಕಾರಿ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಕಾವೇರಿ ಕ್ಷೇತ್ರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು
ತಲಕಾವೇರಿ ಕ್ಷೇತ್ರದಲ್ಲಿ ಕೊಡಗು ಏಕೀಕರಣ ರಂಗದಿಂದ ಸಹಸ್ರಾರು ಭಕ್ತರಿಗೆ ಇನ್ನು 1 ತಿಂಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ.









