ಬೆಂಗಳೂರು:ಗ್ಲೆನ್ ಮ್ಯಾಕ್ಸ್ವೆಲ್(77) ಮತ್ತು ಫಾಫ್ ಡು ಪ್ಲೆಸಿಸ್(62) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂಸ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿಗೆ 7 ರನ್ಗಳ ರೋಚಕ ಜಯ ದಾಖಲಿಸಿದೆ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಗುರಿ ಬೆನ್ನತ್ತಿದ ರಾಜಸ್ಥಾನ್
ರಾಯಲ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 47, ದೇವದತ್ ಪಡಿಕ್ಕಲ್ 52, ನಾಯಕ ಸಂಜು ಸ್ಯಾಮ್ಸನ್ 22 ಧ್ರುವ್ ಜರೆಲ್ 33, ಆರ್.ಅಶ್ವಿನ್ 12 ರನ್ ಗಳಿಸಿ ಗೆಲವುಗಾಗಿ ಹೋರಾಟ ನಡೆಸಿದರೂ ಜಯ ಕೈ ತಪ್ಪಿತು. ಆರ್ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್ ಪಡೆದರು.
ಆರ್ಸಿಬಿಯ ಮೊದಲ ಎರಡು ವಿಕೆಟ್ ಬೇಗನೇ ಉರುಳಿದರೂ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಸೇರಿಕೊಂಡು ಸ್ಫೋಟಕ ಬ್ಯಾಟಿಂಗ್ ನಡೆಸಿ ಉತ್ತಮ ರನ್ ಕಲೆ ಹಾಕಿದರು. ಪ್ರತಿ ಓವರ್ಗೆ ಸರಾಸರಿ 10ರಂತೆ ರನ್ ಗಳಿಸಿದ ಈ ಜೋಡಿ ರಾಜಸ್ಥಾನ್ ಬೌಲರ್ಗಳ ಎಸೆತಗಳನ್ನು ಧೂಳಿಪಟ ಮಾಡಿದರು.ಮ್ಯಾಕ್ಸ್ವೆಲ್ ಮತ್ತು ಡು ಪ್ಲೆಸಿಸ್ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.ಚಿನ್ನಸ್ವಾಮಿ ಸ್ಟೇಡಿಯಂನ ಅಷ್ಟ ದಿಕ್ಕುಗಳಿಗೂ ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ತವರಿನ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು.
ಆದರೆ ಇಲ್ಲದ ರನ್ಗೆ ಓಡಿ ಡು ಪ್ಲೆಸಿಸ್ ರನೌಟ್ ಆದರು. 39 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 62 ರನ್ ಬಾರಿಸಿದರು.ಡು ಪ್ಲೆಸಿಸ್ ವಿಕೆಟ್ ಪತನದ ಬೆನ್ನಲ್ಲೇ ಮ್ಯಾಕ್ಸ್ವೆಲ್ ಕೂಡ ಔಟಾದರು. ಅಶ್ವಿನ್ ಅವರ ಓವರ್ನಲ್ಲಿ ಸಿಕ್ಸರ್ ಬಾರಿಸಲು ಮುಂದಾಗಿ ಹೋಲ್ಡರ್ಗೆ ಕ್ಯಾಚ್ ನೀಡಿದರು. ಡು ಪ್ಲೆಸಿಸ್ ಮತ್ತು ಮ್ಯಾಕ್ಸ್ವೆಲ್ ಸೇರಿಕೊಂಡು ಮೂರನೇ ವಿಕೆಟ್ಗೆ 127 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಮ್ಯಾಕ್ಸ್ವೆಲ್ ಕೇವಲ 44 ಎಸೆತದಲ್ಲಿ 77 ರನ್ ಸಿಡಿಸಿದರು. ಈ ಇನಿಂಗ್ಸ್ ವೇಳೆ 4 ಸಿಕ್ಸರ್ ಮತ್ತು 6 ಬೌಂಡರಿ ದಾಖಲಾಯಿತು. ಬಳಿಕ ಉತ್ತಮ ಸ್ಥಿತಿಯಲ್ಲಿದ್ದ ಆರ್ಸಿಬಿಯ ರನ್ ಗಳಿಕೆ ಕುಸಿತ ಕಂಡಿತು. ಜತೆಗೆ ಸತತ ವಿಕೆಟ್ ಪತನಗೊಂಡಿತು. ರಾಜಸ್ಥಾನ್ ಬೌಲರ್ಗಳು ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ದೊಡ್ಡ ಮೊತ್ತದತ್ತ ಸಾಗುತ್ತಿದ್ದ ಆರ್ಸಿಬಿಯನ್ನು ಕಟ್ಟಿಹಾಕಿದರು.
ದಿನೇಶ್ ಕಾರ್ತಿಕ್ 16 ರನ್, ಸುಯೇಶ್ ಪ್ರಭುದೇಸಾಯಿ(0) ರನ್ ಗಳಿಸಿದರು. ರಾಜಸ್ಥಾನ್ ಪರ ಅಶ್ವಿನ್ ಮತ್ತು ಚಹಲ್ ತಲಾ ಒಂದು ವಿಕೆಟ್ ಪಡೆದರು. ಬೌಲ್ಟ್ 2 ವಿಕಿಟ್ ಕಿತ್ತರು.