ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ.15ರ ಮಂಗಳವಾರ ನಗರದ ನೆಹರೂ ಮೈದಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರ ಆಶಯಗಳು ಮತ್ತು ಕನಸುಗಳನ್ನು ನನಸಾಗಿಸಲು ನಾವೆಲ್ಲರೂ ಸಂಕಲ್ಪ ಮಾಡಿ
ಮುನ್ನಡೆಯಬೇಕು ಎಂದು ಅವರು ಹೇಳಿದರು.
ದಕ್ಷಿಣ ಕನ್ನಡದಲ್ಲಿ ಬ್ರಿಟೀಷರು ತಮ್ಮ ಆಡಳಿತದ ಆರಂಭದಲ್ಲೇ ಪ್ರತಿರೋಧಗಳನ್ನು ಎದುರಿಸಬೇಕಾಯಿತು.1837ರಲ್ಲಿ ನಡೆದ ಅಮರಸುಳ್ಯ ದಂಗೆ ಸೇರಿ ಹಲವಾರು ಹೋರಾಟ ಜಿಲ್ಲೆಯಲ್ಲಿ ನಡೆದಿದೆ ಎಂದು ಸ್ಮರಿಸಿದರು.ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದವರೆಲ್ಲರ ಹೋರಾಟ ತ್ಯಾಗ ಮತ್ತು ದೇಶಪ್ರೇಮವನ್ನು ಪ್ರತಿಯೊಬ್ಬ ಭಾರತೀಯ ಸ್ಮರಿಸಬೇಕಾಗಿದೆ. ನಮ್ಮ ಹೋರಾಟದ ಮೌಲ್ಯಗಳನ್ನು ಸದಾ ಗಮನದಲ್ಲಿರಿಸಿಕೊಂಡು ಮುಂದುವರಿಯಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು. ನಾಡಿನ ಶ್ರೇಯೋಭಿವೃದ್ಧಿಯೇ ಸರ್ಕಾರದ ಆದ್ಯ ಕರ್ತವ್ಯ, ನಾಡಿನ ಜನತೆಗೆ ನೀಡಿದ ಸಮೃದ್ಧ ಕರ್ನಾಟಕವನ್ನು ನಿರ್ಮಿಸಲು ನಾವು ಕಟಿಬದ್ಧರಾಗಿದ್ದವೆ. . ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದ 5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆ ಜಾರಿಯಾಗಿದ್ದು, ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಮಹತ್ವ ನೀಡಲಿದ್ದು, ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹರಡುವ ಸೌಹಾರ್ದತೆ ಕೆಡಿಸುವ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತಿದೆ.
ಈ ಮೂಲಕ ಸಮಾಜದಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದರು.ರೈತರೇ ನಮ್ಮ ದೇಶದ ಬೆನ್ನೆಲುಬು. ಅವರ ಏಳಿಗೆಯೇ ಸರ್ಕಾರದ ಪರಮ ಧ್ಯೇಯ. ಈ ದಿಸೆಯಲ್ಲಿ ರೈತರ ಅಭ್ಯುದಯಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
2022-23ನೇ ಸಾಲಿನಲ್ಲಿ 4,722 ಹೆಕ್ಟೇರ್ ಕ್ಷೇತ್ರದಲ್ಲಿ ಭತ್ತದ ಬಿತ್ತನೆಯಾಗಿದೆ. 2022-23ನೇ ಸಾಲಿನ ರಿಯಾಯಿತಿ ದರದಲ್ಲಿ 568 ಕ್ವಿಂಟಾಲ್ ಬಿತ್ತನೆ ಬೀಜವನ್ನು 1,771 ರೈತರಿಗೆ ವಿತರಿಸಲಾಗಿದೆ.
ಮುಂಗಾರು ಬೆಳೆ ಸಮೀಕ್ಷೆ ಯೋಜನೆಯಡಿ ಶೇ.98 ರೈತರ ತಾಲೂಕುಗಳಲ್ಲಿ ಬೆಳೆದ ಬೆಳೆಯನ್ನು ತಂತ್ರಾಂಶದಲ್ಲಿ ನೋಂದಾಯಿಸಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ
ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುವುದು
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆ ಕಾಮಗಾರಿಯು 3336 ಕಿ.ಮೀ ಉದ್ದದ ರಸ್ತೆಯು ಪೂರ್ಣಗೊಂಡಿರುತ್ತದೆ. 2023-24ನೇ ಸಾಲಿಗೆ 3054 ಸಿ.ಎಂ.ಜಿ.ಎಸ್.ವೈ ರಡಿ 606 ಲಕ್ಷ ರೂ.ಗಳ ಅನುದಾನ ನಿಗದಿಯಾಗಿದ್ದು, ಕ್ರಿಯಾ ಯೋಜನೆ ತಯಾರಿ ಹಂತದಲ್ಲಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2023-24ನೇ ಸಾಲಿನವರೆಗೆ ಜಿಲ್ಲೆಯಲ್ಲಿ 1,61,918 ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ. ಒಟ್ಟು 17 ಲಕ್ಷ ಮಾನವ ದಿನಗಳ ಸೃಜನೆ ಹಾಗೂ 9,490 ಲಕ್ಷ ರೂ.ಗಳು ಆರ್ಥಿಕ ಗುರಿ ನಿಗದಿ ಪಡಿಸಿದೆ. ಆ ಪೈಕಿ 2023ರ ಜುಲೈ ಅಂತ್ಯಕ್ಕೆ 5.38 ಲಕ್ಷ ಮಾನವ ದಿನಗಳನ್ನು ಸೃಜಿಸಿ, 2,935 ಲಕ್ಷ ರೂ.ಗಳು ವೆಚ್ಚ ಮಾಡಲಾಗಿದೆ.
ಗ್ರಾಮೀಣ ವಸತಿ ಯೋಜನೆಯಲ್ಲಿ 2021-22ನೇ ಸಾಲಿಗೆ ಜಿಲ್ಲೆಗೆ ಬಸವ ವಸತಿ ಯೋಜನೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ (ಗ್ರಾಮೀಣ)ಯೋಜನೆಯಡಿ 7,626 ಮನೆಗಳಿಗೆ ಅನುಮೋದನೆಗೊಂಡಿದ್ದು, 2,738 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2021-22ನೇ ಸಾಲಿನ ಪ್ರಧಾನ ಮಂತ್ರಿ ಅವಾಸ್ (ಗ್ರಾಮೀಣ) ಯೋಜನೆಯಡಿ ಜಿಲ್ಲೆಗೆ 229 ಫಲಾನುಭವಿಗಳಿಗೆ ಅನುಮೋದನೆ ಪಡೆದುಕೊಳ್ಳಲಾಗಿದ್ದು ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ.
ಗೃಹಲಕ್ಷ್ಮಿ ಯೋಜನೆಗೆ ಜಿಲ್ಲೆಯಲ್ಲಿ ಈವರೆಗೆ 2,64,337 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಈ ತಿಂಗಳ ಅಂತ್ಯದಲ್ಲೇ ಈ ಯೋಜನೆ ಜಾರಿಯಾಗಲಿದೆ. ಗೃಹ ಜ್ಯೋತಿ ಯೋಜನೆಯಲ್ಲಿ ಜಿಲ್ಲೆಯಲ್ಲಿರುವ 5.59 ಲಕ್ಷ ಗ್ರಾಹಕರಲ್ಲಿ 4.41 ಲಕ್ಷ ಗ್ರಾಹಕರನ್ನು ಈ ವರೆಗೆ ನೋಂದಾಯಿಸಿಕೊಂಡಿದ್ದಾರೆ. ಜೊತೆಗೆ 1.39 ಲಕ್ಷ ಗ್ರಾಹಕರಿಗೆ ಈವರೆಗೆ ಶೂನ್ಯ ಬಿಲ್ಲನ್ನು ವಿತರಿಸುವ ಮೂಲಕ 8.91 ಕೋಟಿ ವಿನಾಯಿತಿಯನ್ನು ಜಿಲ್ಲೆಯ ಜನರಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಎಸ್ಪಿ ರಿಷ್ಯಂತ್,
ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.