ರಾಜ್ಕೋಟ್: ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಸಿಡಿಲಬ್ಬರದ ದ್ವಿಶತಕ ಹಾಗೂ ಸರ್ಫರಾಜ್ ಖಾನ್ ಸಿಡಿಸಿದ ಆಕರ್ಷಕ ಅರ್ಧ ಶತಕದ ನೆರವಿನಿಂದ ರಾಜ್ಕೋಟ್ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ ನಾಲ್ಕನೇ ದಿನ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 430 ರನ್ ಗಳಿಸಿ ಇನ್ನೀಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಆ ಮೂಲಕ ಭಾರತ ಇಂಗ್ಲೆಂಡ್ ಗೆಲುವಿಗೆ 557 ರನ್ ಗುರಿ ನೀಡಿದೆ. ಅಜೇಯ 214 ರನ್ ಗಳಿಸಿದ ಜೈಸ್ವಾಲ್ ಹಾಗೂ
ಅಜೇಯ 68 ರನ್ ಗಳಿಸಿದ ಸರ್ಫರಾಜ್ ಖಾನ್ ಭಾರತಕ್ಕೆ ಬೃಹತ್ ಮೊತ್ತ ಪೇರಿಸಲು ನೆರವಾದರು. ನಿನ್ನೆ ಶತಕ ಪೂರ್ತಿಯಾದ ಬಳಿ ರಿಟೇರ್ಡ್ ಹರ್ಟ್ ಆಗಿ ಮರಳಿದ್ದ ಜೈಸ್ವಾಲ್ ಇಂದು ಮತ್ತೆ ಕ್ರೀಸಿಗೆ ಬಂದು ಮನಮೋಹಕ ಇನ್ನೀಂಗ್ಸ್ ಕಟ್ಟಿದರು 236 ಎಸೆತಗಳಲ್ಲಿ 14 ಬೌಂಡರಿ ಹಾಗೂ 12 ಭರ್ಜರಿ ಸಿಕ್ಸರ್ ನೆರವಿನಿಂದ ಜೈಸ್ವಾಲ್ ಅಜೇಯ 214 ರನ್ ಗಳಿಸಿದರು. ದ್ವಿಶತಕ ಪೂರ್ತಿಗೊಳಿಸಿದ ಕೂಡಲೇ ಎರಡು ಸಿಕ್ಸರ್ ಸಿಡಿಸಿ ಸಂಭ್ರಮಿಸಿದರು. ಚೊಚ್ಚಲ ಟೆಸ್ಟ್ ಆಡುತ್ತಿರುವ ಸರ್ಫರಾಜ್ ಖಾನ್ ಸತತ ಎರಡನೇ ಇನ್ನೀಂಗ್ಸ್ನಲ್ಲಿಯೂ ಅರ್ಧ ಶತಕ ಸಿಡಿಸಿದರು. ಕೇವಲ 72 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 68 ರನ್ ಗಳಿಸಿ ಮಿಂಚಿದರು. ಶುಭುಮನ್ ಗಿಲ್ 151 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹೀತ 91 ರನ್ಗಳಿಸಿ ಶತಕ ವಂಚಿತರಾದರು. ನೈಟ್ ವಾಚ್ಮ್ಯಾನ್ ಆಗಿ ಆಗಮಿಸಿದ್ದ ಕುಲ್ದೀಪ್ ಯಾದವ್ 27 ರನ್ ಗಳಿಸಿ ಔಟ್ ಆದರು. ರೋಹಿತ್ ಶರ್ಮಾ 19, ಪಾಟೀದಾರ್ ಶೂನ್ಯಕ್ಕೆ ಔಟಾಗಿದ್ದಾರೆ.
126 ರನ್ ಮೊದಲ ಇನ್ನೀಂಗ್ಸ್ ಮುನ್ನಡೆ ಗಳಿಸಿದ ಭಾರತ ತಂಡ ಒಟ್ಟಾರೆ 556 ರನ್ಗಳ ಮುನ್ನಡೆ ಗಳಿಸಿ ಇನ್ನೀಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಸರಣಿಯಲ್ಲಿನ ಜೈಸ್ವಾಲ್ ಸಿಡಿಸಿದ ಎರಡನೇ ದ್ವಿಶತಕ ಇದಾಗಿದೆ. ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು.









