ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆದ ಎರಡನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 100 ರನ್ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.ಆ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಅಂತರದ ಸಮಬಲ ಸಾಧಿಸಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು.ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಎಡಗೈ ಆರಂಭಿಕ
ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಚೊಚ್ಚಲ ಶತಕ (100) ಹಾಗೂ ಋತುರಾಜ್ ಗಾಯಕವಾಡ್ ಸಮಯೋಚಿತ ಅರ್ಧಶತಕದ (77) ಬೆಂಬಲದಿಂದ ನಿಗದಿತ 20 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 234 ರನ್ಗಳ ಬೃಹತ್ ಮೊತ್ತ ಪೇರಿಸಿತು.ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ 18.4 ಓವರ್ಗಳಲ್ಲಿ 134 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಜಿಂಬಾಬ್ವೆ ಪರ ವೆಸ್ಲಿ ಮದವೆರೆ 43 ರನ್ ಗಳಿಸಿದರು. ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿದ್ದ ರವಿ ಬಿಷ್ಣೋಯಿ ಮತ್ತೊಮ್ಮೆ ಮಿಂಚಿನ ದಾಳಿ ಸಂಘಟಿಸಿದ್ದು, ನಾಲ್ಕು ಓವರ್ಗಳಲ್ಲಿ 11 ರನ್ನಿಗೆ ಎರಡು ವಿಕೆಟ್ ಗಳಿಸಿದರು. ವೇಗಿಗಳಾದ ಆವೇಶ್ ಖಾನ್ ಹಾಗೂ ಮುಕೇಶ್ ಕುಮಾರ್ ತಲಾ ಮೂರು ವಿಕೆಟ್ ಗಳಿಸಿದರು. ಈ ಮೊದಲು ಅಭಿಷೇಕ್ ಶರ್ಮಾ ಚೊಚ್ಚಲ ಶತಕ (100) ಹಾಗೂ ಋತುರಾಜ್ ಗಾಯಕವಾಡ್ ಸಮಯೋಚಿತ ಅರ್ಧಶತಕದ (77) ಬೆಂಬಲದಿಂದ ಟೀಮ್ ಇಂಡಿಯಾ, ನಿಗದಿತ 20 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 234 ರನ್ಗಳ ಬೃಹತ್ ಮೊತ್ತ ಪೇರಿಸಿತು.ಇದು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತದ ಗರಿಷ್ಠ ಮೊತ್ತವಾಗಿದೆ.
ಟಾಸ್ ಗೆದ್ದ ಭಾರತ ತಂಡದನಾಯಕ ಶುಭಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಗಿಲ್ (2) ವಿಕೆಟ್ ಬೇಗನೇ ನಷ್ಟವಾಯಿತು. ಈ ವೇಳೆ ಜೊತೆಗೂಡಿದ ಅಭಿಷೇಕ್ ಹಾಗೂ ಗಾಯಕವಾಡ್ ತಂಡವನ್ನು ನಿಧಾನವಾಗಿ ಮುನ್ನಡೆಸಿದರು.ಬಳಿಕ ಬಿರುಸಿನ ಆಟವಾಡಿದ ಅಭಿಷೇಕ್, ತಮ್ಮ ಎರಡನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಾಧನೆ ಮಾಡಿದರು. ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ ಅಭಿಷೇಕ್ ಕೇವಲ 46 ಎಸೆತಗಳಲ್ಲಿ ಶತಕ ಗಳಿಸಿದರು.ಅಲ್ಲದೆ ದ್ವಿತೀಯ ವಿಕೆಟ್ಗೆ ಗಾಯಕವಾಡ್ ಜೊತೆ 137 ರನ್ಗಳ ಜೊತೆಯಾಟ ಕಟ್ಟಿದರು. ಅಭಿಷೇಕ್ 47 ಎಸೆತಗಳಲ್ಲಿ ಎಂಟು ಸಿಕ್ಸರ್ ಹಾಗೂ ಏಳು ಬೌಂಡರಿ ನೆರವಿನಿಂದ 100 ರನ್ ಗಳಿಸಿದರು ಗಾಯಕವಾಡ್ ಅರ್ಧಶತಕದ ಸಾಧನೆ ಮಾಡಿದರು. ಇದು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಗಾಯಕವಾಡ್ ಗಳಿಸಿದ 4ನೇ ಅರ್ಧಶತಕವಾಗಿದೆ. ಕೊನೆಯಲ್ಲಿ ರಿಂಕು ಸಿಂಗ್ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಆ ಮೂಲಕ ಭಾರತ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.ಗಾಯಕವಾಡ್ 47 ಎಸೆತಗಳಲ್ಲಿ ಅಜೇಯ 77 ರನ್ (11 ಬೌಂಡರಿ, 1 ಸಿಕ್ಸರ್) ಗಳಿಸಿದರು. ರಿಂಕು ಸಿಂಗ್ ಕೇವಲ 22 ಎಸೆತಗಳಲ್ಲಿ ಅಜೇಯ 48 ರನ್ಗಳ (5 ಸಿಕ್ಸರ್, 2 ಬೌಂಡರಿ) ಉಪಯುಕ್ತ ಕಾಣಿಕೆ ನೀಡಿದರು. ಗಾಯಕವಾಡ್ ಹಾಗೂ ರಿಂಕು ಮುರಿಯದ ಮೂರನೇ ವಿಕೆಟ್ಗೆ 87 ರನ್ಗಳ ಜೊತೆಯಾಟ ಕಟ್ಟಿದರು.
ಕೊನೆಯ 10 ಓವರ್ಗಳಲ್ಲಿ ಭಾರತ 160 ರನ್ ಪೇರಿಸಿತು. ಇದು ದಾಖಲೆಯಾಗಿದೆ.