ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆದ ಮೂರನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 23 ರನ್ ಅಂತರದ ಗೆಲುವು ದಾಖಲಿಸಿದೆ.ಆ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1ರ ಅಂತರದ ಮುನ್ನಡೆ ಗಳಿಸಿದೆ. ಹರಾರೆಯ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ನಾಯಕ ಶುಭಮನ್ ಗಿಲ್ ಅರ್ಧಶತಕ (66) ಹಾಗೂ ಋತುರಾಜ್ ಗಾಯಕವಾಡ್ ಆಕರ್ಷಕ ಬ್ಯಾಟಿಂಗ್
ನೆರವಿನಿಂದ (49) ನಿಗದಿತ 20 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಯಾವ ಹಂತದಲ್ಲಿಯೂ ಪೈಪೋಟಿ ಒಡ್ಡಲಿಲ್ಲ. ಅಲ್ಲದೆ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಸಾಧ್ಯವಾಯಿತು.ಜಿಂಬಾಬ್ವೆಯ ಅಗ್ರ ಕ್ರಮಾಂಕದ ಬ್ಯಾಟರ್ಗಳು ಮತ್ತೆ ವೈಫಲ್ಯವನ್ನು ಅನುಭವಿಸಿದರು. 39 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ನಡುವೆ ದಿಟ್ಟ ಹೋರಾಟ ತೋರಿದ ಡಿಯಾನ್ ಮೆಯರ್ಸ್ ಚೊಚ್ಚಲ ಅರ್ಧಶತಕದ ಸಾಧನೆ ಮಾಡಿದರು. 49 ಎಸೆತಗಳಲ್ಲಿ 65 ರನ್ ಗಳಿಸಿ (7 ಬೌಂಡರಿ, 1 ಸಿಕ್ಸರ್) ಔಟಾಗದೆ ಉಳಿದರು. ವಿಕೆಟ್ ಕೀಪರ್ ಬ್ಯಾಟರ್ ಕ್ಲೈವ್ ಮೆದಾಂದೆ 37 ರನ್ ಗಳಿಸಿದರು.ಭಾರತದ ಪರ ವಾಷಿಂಗ್ಟನ್ ಸುಂದರ್ 15 ರನ್ ತೆತ್ತು ಮೂರು ವಿಕೆಟ್ ಕಬಳಿಸಿ ಮಿಂಚಿದರು. ಖಲೀಲ್ ಅಹ್ಮದ್ 15ಕ್ಕೆ ಒಂದು ವಿಕೆಟ್ ಹಾಗೂ ಆವೇಶ್ ಖಾನ್ 39ಕ್ಕೆ ಎರಡು ವಿಕೆಟ್ ಗಳಿಸಿದರು.
ಈ ಮೊದಲು ನಾಯಕ ಶುಭಮನ್ ಗಿಲ್ ಅರ್ಧಶತಕ (66) ಹಾಗೂ ಋತುರಾಜ್ ಗಾಯಕವಾಡ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ (49) ಭಾರತ ನಿಗದಿತ 20 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ ಜೊತೆ ಮೊದಲ ವಿಕೆಟ್ಗೆ 67 ರನ್ ಪೇರಿಸಿದರು. ಬಿರುಸಿನ ಆಟವಾಡಿದ ಜೈಸ್ವಾಲ್ 27 ಎಸೆತಗಳಲ್ಲಿ 36 ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿದರು.ಕಳೆದ ಪಂದ್ಯದಲ್ಲಿ ಚೊಚ್ಚಲ ಶತಕ ಗಳಿಸಿದ್ದ ಅಭಿಷೇಕ್ ಶರ್ಮಾ, ಇಂದು ಮೂರನೇ ಕ್ರಮಾಂಕದಲ್ಲಿ ಯಶ ಕಾಣಲಿಲ್ಲ. 10 ರನ್ ಗಳಿಸಿ ಔಟ್ ಆದರು.ಬಳಿಕ ಋತುರಾಜ್ ಗಾಯಕವಾಡ್ ಅವರೊಂದಿಗೆ ಜೊತೆಗೂಡಿದ ಗಿಲ್ ಮೂರನೇ ವಿಕೆಟ್ಗೆ 72 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು.
ಗಿಲ್ 49 ಎಸೆತಗಳಲ್ಲಿ 66 ರನ್ (7 ಬೌಂಡರಿ, 3 ಸಿಕ್ಸರ್) ಗಳಿಸಿದರು. ಮತ್ತೊಂದೆಡೆ ಋತುರಾಜ್ ಕೇವಲ ಒಂದು ರನ್ನಿಂದ ಅರ್ಧಶತಕ ವಂಚಿತರಾದರು. ಅವರು 28 ಎಸೆತಗಳಲ್ಲಿ 49 ರನ್ (3 ಸಿಕ್ಸರ್, 4 ಬೌಂಡರಿ) ಗಳಿಸಿದರು.ಕೊನೆಯಲ್ಲಿ ಸಂಜು ಸ್ಯಾಮ್ಸನ್ ಅಜೇಯ 12 ರನ್ಗಳ ಕಾಣಿಕೆ ನೀಡಿದರು.