ಸುಳ್ಯ: ಇಂದು ಸುಳ್ಯಕ್ಕೆ ಆಗಮಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ತಾಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿ ಬಗ್ಗೆ ಸಾರ್ವಜನಿಕರು ಬೇಡಿಕೆ ಸಲ್ಲಿಸಿದರು. ಅಭಿವೃದ್ಧಿ ಆಗಬೇಕಾದ ಪ್ರಮುಖ ರಸ್ತೆಗಳ ಪಟ್ಟಿ ನೀಡಿ ಎಂದು ಪ್ರಮುಖರಿಗೆ ಸೂಚಿಸಿದರು. ಸಿಆರ್ಎಫ್ ಅನುದಾನ ತರಿಸುವ ಪ್ರಯತ್ನ ನಡೆಸುತ್ತೇನೆ ಎಂದು ಅವರು ಹೇಳಿದರು. ಅಲ್ಲದೆ ಪಿಎಂಜಿಎಸ್ವೈ
ಯೋಜನೆ ಬಂದರೆ ಅದನ್ನು ಲಭ್ಯ ಮಾಡುವಂತೆ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.
ಮಂಗಳೂರು ಸುಬ್ರಹ್ಮಣ್ಯ ಮಧ್ಯೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಂಜೆ ಮತ್ತು ಬೆಳಿಗ್ಗೆ ಪ್ಯಾಸೆಂಜರ್ ರೈಲು ಸಂಚರಿಸಲು ಕ್ರಮಕೈಗೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಸಂಸದ ಬ್ರಿಜೇಶ್ ಚೌಟರವರಿಗೆ ಮನವಿ ಸಲ್ಲಿಸಿದರು. ಕಾಣಿಯೂರು, ಎಡಮಂಗಲ, ಕೋಡಿಂಬಾಳದಲ್ಲಿ ರೈಲು ನಿಲುಗಡೆ ಮಾಡಬೇಕು, ಎಡಮಂಗಲದಲ್ಲಿ ಅಂಡರ್ಪಾಸ್ ನಿರ್ಮಾಣ ಮತ್ತಿತರ ಬೇಡಿಕೆಯ ಮನವಿ ಸಲ್ಲಿಸಲಾಯಿತು. ಜಿಲ್ಲೆಯ ರೈಲ್ವೇ ಯೋಜನೆಗಳ ಬಗ್ಗೆ ಸಭೆ ನಡೆಸಲಾಗುವುದು ಎಂದು ಸಂಸದರು ಹೇಳಿದರು.
ಬೆಳ್ಳಾರೆ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಹೊತ್ತು ವೈದ್ಯರಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಅಲ್ಲಿಗೆ ಕಾಯಂ ವೈದ್ಯರ ನೇಮಕವಾಗಬೇಕೆಂದು ಸಾರ್ವಜನಿಕರು ಅಹವಾಲು ನೀಡಿದ್ದು ಇದಕ್ಕೆ ಸ್ಪಂದಿಸಿದ ಸಂಸದರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಲಳಂಬೆ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಪ್ರಮುಖರಾದ ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ, ರಾಕೇಶ್ ರೈ ಕೆಡೆಂಜಿ, ಎ.ಟಿ.ಕುಸುಮಾಧರ,ವಿನಯ ಮುಳುಗಾಡು, ಸುದರ್ಶನ ಪಾತಿಕಲ್ಲು ಮತ್ತಿತರರು ಉಪಸ್ಥಿತರಿದ್ದರು.