ರಾಜ್ಪುರ: ನಾಯಕ ಸೂರ್ಯಕುಮಾರ್ ಯಾದವ್, ಇಶಾನ್ ಕಿಸಾನ್ ಹಾಗೂ ಶಿವಂ ದುಬೆ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ನ್ಯೂಝಿಲ್ಯಾಂಡ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಭಾರತ
15.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಗೆಲುವಿನ ನಗೆ ಬೀರಿತು. ನಾಯಕ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 82 ರನ್ ಚಚ್ಚಿದರು. ಇಶಾನ್ ಕಿಶನ್ 32 ಎಸೆತಗಳಲ್ಲಿ 21 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 76 ರನ್ ಸಿಡಿಸಿದರು. ಶಿವಂ ದುಬೆ 18 ಎಸೆತಗಳಲ್ಲಿ 1 ಬೌಂಡರಿ ಹಾಗೂ 3ಸಿಕ್ಸರ್ ನೆರವಿನಿಂದ ಅಜೇಯ 36 ರನ್ ಗಳಿಸಿದರು. ಆರಂಭಿಕರಾದ ಸಂಜು ಸ್ಯಾಮ್ಸನ್(6), ಅಭಿಷೇಕ್ ಶರ್ಮ(0) ಬೇಗನೇ ಔಟ್ ಆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಬ್ಯಾಟರ್ಗಳು ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ನಡೆಸಿದರು. ಡಿವೊನ್ ಕಾನ್ವೆ (19 ರನ್, 9 ಎ, 4X3, 6X1) ಹಾಗೂ ಟಿಮ್ ಸೈಫರ್ಟ್ (24 ರನ್, 13ಎ, 4X5) ಸ್ಫೋಟಕ ಆರಂಭ ಒದಗಿಸಿದರು.ಮಧ್ಯಮ ಕ್ರಮಾಂಕದಲ್ಲಿ ರಚಿನ್ ರವೀಂದ್ರ (44 ರನ್, 26 ಎ, 4X2, 6X4) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇನ್ನೂ ಕೆಳ ಕ್ರಮಾಂಕದಲ್ಲಿ ನಾಯಕ ಮಿಚೆಲ್ ಸ್ಯಾಂಟ್ನರ್ (ಅಜೇಯ 47ರನ್, 27ಎ, 4X6, 6X1) ನೆರವಿನಿಂದ ನ್ಯೂಜಿಲೆಂಡ್ ತಂಡ 200ರನ್ ಗಡಿ ತಲುಪಿತು.
ಭಾರತದ ಪರ ಕುಲದೀಪ್ ಯಾದವ್ 2ವಿಕೆಟ್ ಪಡೆದು ಮಿಂಚಿದರು, ಹಾರ್ದಿಕ್ ಪಾಂಡ್ಯ, ಹರ್ಷಿತ್ ರಾಣಾ, ಹಾಗೂ ಶಿವಂ ದುಬೆ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.












