ದಂಬುಲಾ: ಭಾರತ ಮಹಿಳೆಯರ ಕ್ರಿಕೆಟ್ ತಂಡವು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ಗೆ ಲಗ್ಗೆಯಿಟ್ಟಿತು. ಶುಕ್ರವಾರ ನಡೆದ ಸೆಮಿಫೈನಲ್ನಲ್ಲಿ ರೇಣುಕಾ ಸಿಂಗ್ (10ಕ್ಕೆ3) ಮತ್ತು ರಾಧಾ ಯಾದವ್ (14ಕ್ಕೆ3) ಅವರ ಮಾರಕ ಬೌಲಿಂಗ್ನಿಂದಾಗಿ ಭಾರತ ತಂಡವು ಬಾಂಗ್ಲಾದೇಶ ಎದುರು 10 ವಿಕೆಟ್ಗಳಿಂದ ಗೆಲುವು ಸಾಧಿಸಿತು.ಟಾಸ್ ಗೆದ್ದ ಬಾಂಗ್ಲಾದೇಶ ತಂಡವು
ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರೇಣುಕಾ ಸಿಂಗ್ ಮತ್ತು ರಾಧಾ ಅವರ ದಾಳಿಯ ಮುಂದೆ ಕುಸಿಯಿತು. 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 80 ರನ್ಗಳ ಅಲ್ಪಮೊತ್ತ ಗಳಿಸಿತು. ನಾಯಕಿ ನಿಜರ್ ಸುಲ್ತಾನಾ (32; 51ಎ, 4X2) ಮತ್ತು ಶೋಮಾ ಅಕ್ತರ್ (ಔಟಾಗದೆ 19, 18ಎ, 4X2) ಅವರಿಬ್ಬರನ್ನು ಬಿಟ್ಟರೆ ಉಳಿದ ಬ್ಯಾಟರ್ಗಳು ಎರಡಂಕಿ ಮುಟ್ಟಲಿಲ್ಲ. ಈ ಗುರಿಯನ್ನು ಭಾರತದ ಆರಂಭಿಕ ಜೋಡಿಯು ಸುಲಭವಾಗಿ ಮುಟ್ಟಿತು. 11 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 83 ರನ್ ಗಳಿಸಿತು. ಅದರಲ್ಲಿ ಸ್ಮೃತಿ ಮಂದಾನ (ಔಟಾಗದೆ 55; 39ಎ, 4X9, 6X1) ಅರ್ಧಶತಕ ಗಳಿಸಿದರು. ಶಫಾಲಿ ವರ್ಮಾ ಔಟಾಗದೆ 26 ರನ್ ಗಳಿಸಿದರು.
ಭಾರತ ತಂಡವು ಕಳೆದ ನಾಲ್ಕು ಟಿ20 ಏಷ್ಯಾ ಕಪ್ ಟೂರ್ನಿಗಳಲ್ಲಿ ಮೂರು ಬಾರಿ ಚಾಂಪಿಯನ್ ಆಗಿದೆ. ಇದೀಗ ನಾಲ್ಕನೇ ಪ್ರಶಸ್ತಿಯತ್ತ ಚಿತ್ತ ನೆಟ್ಟಿದೆ. ಭಾರತದ ಪರ ನಿಖರ ದಾಳಿ ಸಂಘಟಿಸಿದ ರೇಣುಕಾ ಸಿಂಗ್, ನಾಲ್ಕು ಓವರ್ಗಳಲ್ಲಿ ಕೇವಲ 10 ರನ್ ಮಾತ್ರ ನೀಡಿ ಮೂರು ವಿಕೆಟ್ ಕಬಳಿಸಿ ಮಿಂಚಿದರು.ಆ ಮೂಲಕ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 50 ವಿಕೆಟ್ಗಳ ಸಾಧನೆ ಮಾಡಿದರು.ರಾಧಾ ಯಾದವ್ ಸಹ ಕೇವಲ 14 ರನ್ ತೆತ್ತು ಮೂರು ವಿಕೆಟ್ ಕಬಳಿಸಿದರು.