ಸುಳ್ಯ: ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತನಕದ ಮಳೆಗಾಲ ದುರ್ಬಲವಾಗಿದ್ದರೂ ಹಿಂಗಾರು ಮಳೆ ಚುರುಕಾಗಿದೆ. ಇದರ ಪರಿಣಾಮ ನವೆಂಬರ್ ತಿಂಗಳಲ್ಲಿ ಭರ್ಜರಿ ಮಳೆ ಸುರಿಯುತಿದೆ. ಸುಳ್ಯದಲ್ಲಿ ಗುರುವಾರ ರಾತ್ರಿ ಸುಮಾರು ಎರಡೂವರೆ ಗಂಟೆಗಳ ಕಾಲ ಭರ್ಜರಿ ಮಳೆ ಸುರಿಯಿತು. ಗುಡುಗು ಮಿಂಚಿನ ಅಬ್ಬರದೊಂದಿಗೆ
ಭಾರೀ ಮಳೆಯಾಗಿದೆ. ರಾತ್ರಿ 8.30ರ ವೇಳೆಗೆ ಆರಂಭವಾದ ಮಳೆ ರಾತ್ರಿ 11 ಗಂಟೆಯ ತನಕ ಮುಂದುವರಿಯಿತು. ಎದೆಯಲ್ಲಿ ನಡುಕ ಹುಟ್ಟಿಸಿದ ಗುಡುಗು ಹಾಗೂ ಸಿಡಿಲಿನ ಅಬ್ಬರದೊಂದಿಗೆ ಭಾರೀ ಮಳೆ ಸುರಿಯಿತು. ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ಸುಳ್ಯ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಕರಾವಳಿ ಜಿಲ್ಲೆಗಳು ಸೇದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಸುರಿದಿದೆ. ಹಿಂಗಾರು ಮಳೆ ಮುಂದುವರಿಯುವ ಸಾಧ್ಯತೆ ಇದ್ದು ರಾಜ್ಯದ ವಿವಿಧ ಭಾಗಗಳಲ್ಲಿ ನ.7ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.









