ಸುಳ್ಯ: ಹಗಲಿನ ವೇಳೆ ಅತಿ ಕಠಿಣ ಬಿಸಿಲು, 40-41 ಡಿಗ್ರಿ ಸೆಲ್ಸಿಯಸ್ಗೆ ಏರುವ ಉಷ್ಣಾಂಶ, ಬೀಸುವ ಉಷ್ಣ ಗಾಳಿ ಅದೇ ರಾತ್ರಿಯ ವೇಳೆ ಚಳಿಯ ವಾತಾವರಣ. ಕಳೆದ ಕೆಲವು ದಿನಗಳಿಂದ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ದಾಖಲಾಗುತ್ತಿರುವುದು ಅತಿ ವಿಚಿತ್ರ ಹವಾಮಾನ. ಮಾರ್ಚ್ ತಿಂಗಳಲ್ಲಿ ತಾಪಮಾನ ಏರುವುದು ಸಾಮಾನ್ಯವಾದರೂ ಕಳೆದ ಕೆಲವು
ದಿನಗಳಿಂದ ಒಮ್ಮಿಂದೊಮ್ಮೆಲೆ ಉಷ್ಣಾಂಶ ಏರಿಕೆಯಾಗಿದೆ. 11.30 ರಿಂದ 3.30ರವರೆಗೆ ಏರಿದ ತಾಪಮಾನ 40-41 ಡಿಗ್ರಿ ಸೆಲ್ಸಿಯಸ್ವರೆಗೆ ಏರುತಿದೆ. ಭಾನುವಾರ ಕೂಡ ತಾಪಮಾನ ಏರಿಕೆಯಲ್ಲಿದ್ದು ಮಧ್ಯಾಹ್ನದ ವೇಳೆಗೆ 38-39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದೆ. ಕಳೆದ ಕೆಲವು ದಿನಗಳಿಂದ ರಾತ್ರಿಯ ವೇಲೆ ಚಳಿಯ ವಾತಾವರಣ ಕಂಡು ಬರುವುದು ಅಚ್ಚರಿ ಮೂಡಿಸಿದೆ. ರಾತ್ರಿ ಮತ್ತು ಬೆಳಗ್ಗಿನ ಜಾವ ಒಳ್ಳೆಯ ಚಳಿಯಾಗುವ ಅನುಭವ ಆಗಿದೆ. ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಈ ರೀತಿಯ ಹವಾಮಾನ ಉಂಟಾಗಿದೆ. ಸೆಕೆ ಏರಿಕೆ ಮಾಮೂಲಿಯಾದರೂ ಈಗ ರಾತ್ರಿ ಚಳಿಯಾಗುವುದು ಅತಿ ವಿಚಿತ್ರ ಎನ್ನುತ್ತಾರೆ ಗ್ರಾಮೀಣ ಭಾಗದ ಜನರು. ಸೆಕೆ, ಚಳಿಯ ವಿಚಿತ್ರ ವಾತಾವರಣ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತಿದೆ. ತಲೆನೋವು, ಜ್ವರ, ಕೆಮ್ಮು ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಡುತಿದೆ.
ಹಗಲಿನ ವೇಳೆ ಉರಿಯುವ ಬೆಂಕಿಯಂತಿರುವ ಬಿಸಿಲಿಗೆ ಭುವಿ ಕಾದ ಕಬ್ಬಿಣದಂತಾಗುತಿದೆ. ಮನೆಯಿಂದ ಹೊರ ಬರಲಾಗದೆ ಬಸವಳಿಯುವ ಸ್ಥಿತಿ ಉಂಟಾಗಿದೆ. ಬೆವರಿ ಬಸವಳಿಯುವ ಜನರು ತಂಪು, ಪಾನೀಯ, ಎಳನೀರು, ಕಲ್ಲಂಗಡಿ ಹಣ್ಣಿಗೆ ಮೊರೆ ಹೋಗುತ್ತಾರೆ. ಮಧ್ಯಾಹ್ನದ ವೇಳೆಗೆ ರಸ್ತೆಯಲ್ಲಿ ಪ್ರಯಾಣಿಸುವಾಗ ಬೆಂಕಿಯಲ್ಲಿ ಹೋದ ಅನುಭವ ಉಂಟಾಗುತ್ತದೆ. ವಾತಾವರಣವೇ ಬಿಸಿಯಾಗಿದ್ದು ಬಿಸಿ ಗಾಳಿ ಬೀಸುತಿದೆ. ಬಿಸಿಲಿಗೆ ಹೋಗುವಾಗ, ಕೆಲಸ ಮಾಡುವಾಗ ಆರೋಗ್ಯದ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ಜಾಗೃತಿ ವಹಿಸಬೇಕು ಎಂದು ಆರೋಗ್ಯ ಇಲಾಖೆಯೂ ಮುನ್ಸೂಚನೆ ನೀಡಿದೆ. ಬೇಸಿಗೆಯಲ್ಲಿ ಅಲ್ಲಲ್ಲಿ ಗುಡ್ಡಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿಯುವುದು ವ್ಯಾಪಕವಾಗಿ ಕಂಡು ಬಂದಿದೆ.