ಅಹಮ್ಮದಾಬಾದ್: ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೈವೋಲ್ಟೇಜ್ ಕದನದಲ್ಲಿ ಆತಿಥೇಯ ಗುಜರಾತ್ ತಂಡ ಬಲಿಷ್ಠ ಮುಂಬೈ ತಂಡಕ್ಕೆ 6 ರನ್ಗಳ ಸೋಲುಣಿಸಿದೆ. ತೀವ್ರ ರೋಚಕತೆಯಿಂದ ಕೂಡಿದ ಈ ಪಂದ್ಯದಲ್ಲಿ ಕೊನೆಯ ಹಂತದವರೆಗೂ ಗೆಲುವಿನ ಫೇವರೆಟ್ ಎನಿಸಿಕೊಂಡಿದ್ದ ಮುಂಬೈ, ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು. ಇತ್ತ ಮೊದಲ ಪಂದ್ಯದ ನಾಯಕತ್ವದಲ್ಲೇ
ಶುಭ್ಮನ್ ಗಿಲ್ ಗೆಲುವಿನ ನಗೆ ಬೀರಿದರು. ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದ ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯಗೆ ಸೋಲಿನ ಶಾಕ್ ನೀಡಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 168 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಗಿ 6 ರನ್ಗಳಿಂದ ಸೋಲೊಪ್ಪಿಕೊಂಡಿತು.
ಮುಂಬೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಇಶಾನ್ ಕಿಶನ್ ಶೂನ್ಯಕ್ಕೆ ಔಟಾದರೆ, ನಂತರ ಬಂದ ನಮನ್ ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಡೆವಾಲ್ಡ್ ಬ್ರೆವಿಸ್ 3 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಿತ ಮುಂಬೈ ಪರ ಅತ್ಯಧಿಕ 46 ರನ್ ಗಳಿಸಿದರೆ ಮಾಜಿ ನಾಯಕ ರೋಹಿತ್ ಶರ್ಮಾ 29 ಎಸೆತಗಳಲ್ಲಿ 43 ರನ್ ಕೊಡುಗೆ ನೀಡಿದರು. ನಂತರ ಬಂದ ತಿಲಕ್ ವರ್ಮಾ 25 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಹಾರ್ದಿಕ್ ಪಾಂಡ್ಯ 4 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 11 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.ಮೊದಲು ಬ್ಯಾಟ್ ಮಾಡಿದ ಗುಜರಾತ್ ಪರ ಸಾಯಿ ಸುದರ್ಶನ್ 45 ರನ್ಗಳ ಗರಿಷ್ಠ ಇನ್ನಿಂಗ್ಸ್ ಆಡಿದರು. ನಾಯಕ ಶುಭ್ಮನ್ ಗಿಲ್ 31 ರನ್ ಮತ್ತು ರಾಹುಲ್ ತೆವಾಟಿಯಾ 22 ರನ್ಗಳ ಕೊಡುಗೆ ನೀಡಿದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದರು. ಜೆರಾಲ್ಡ್ ಕೊಯೆಟ್ಜಿ ಎರಡು ವಿಕೆಟ್ ಪಡೆದರು. ಪಿಯೂಷ್ ಚಾವ್ಲಾ 1 ವಿಕೆಟ್ ಪಡೆದರು.









