ನವದೆಹಲಿ:ಗುಜರಾತ್ ಟೈಟನ್ಸ್ ತಂಡವು ಬುಧವಾರ 1 ರನ್ ಅಂತರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.211 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಕೆ.ಎಲ್.ರಾಹುಲ್ (92; 52ಎ) ಹಾಗೂ ಪಥುಮ್ ನಿಸಾಂಕ (41; 24ಎ) ಉತ್ತಮ ಆರಂಭ ಒದಗಿಸಿದರು. ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಗಾಯಗೊಂಡು ನಿವೃತ್ತಿಯಾದರೂ, ಮತ್ತೆ ಬ್ಯಾಟಿಂಗ್ಗೆ ಇಳಿದು ಅಬ್ಬರಿಸಿದರು. ಮೊಹಮ್ಮದ್ ಸಿರಾಜ್ ಎಸೆದ
ಇನಿಂಗ್ಸ್ನ19ನೇ ಓವರ್ನಲ್ಲಿ 23 ರನ್ ಸೂರೆಮಾಡಿದರು.ಡೆಲ್ಲಿ ಗೆಲುವಿಗೆ ಕೊನೆಯ ಓವರ್ನಲ್ಲಿ 13 ರನ್ ಬೇಕಿತ್ತು. ವಿಪ್ರಜ್ ನಿಗಮ್ ಹಾಗೂ ಮಿಲ್ಲರ್ ಕ್ರೀಸ್ನಲ್ಲಿದ್ದರು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವಿಪ್ರಜ್, ಎರಡನೇ ಎಸೆತದಲ್ಲಿ ಶುಭಮನ್ ಗಿಲ್ಗೆ ಕ್ಯಾಚ್ ಆದರು. ಕ್ರೀಸ್ಗೆ ಬಂದ ಕುಲದೀಪ್ ಯಾದವ್ ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಓವರ್ನ ನಾಲ್ಕನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ಮಿಲ್ಲರ್ ಡೆಲ್ಲಿ ತಂಡಕ್ಕೆ ಗೆಲುವು ಹತ್ತಿರವಾಗಿಸಿದರು.
ಕೊನೆಯ ಎರಡು ಎಸೆತಗಳಲ್ಲಿ 2 ರನ್ಗಳಷ್ಟೇ ಬೇಕಿದ್ದವು. ಐದನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳಲು ಮಿಲ್ಲರ್ ನಿರಾಕರಿಸಿದರು.ಆದರೆ, ಅದು ತಂಡಕ್ಕೆ ಮುಳುವೂ ಆಯಿತು. ಪ್ರಸಿದ್ಧ ಕೃಷ್ಣ ಎಸೆದ ಕೊನೆಯ ಎಸೆತದಲ್ಲಿ ರನ್ ಗಳಿಸಲು ಮಿಲ್ಲರ್ ವಿಫಲರಾದರು. ಚೆಂಡು ನೇರವಾಗಿ ವಿಕೆಟ್ಕೀಪರ್ ಬಟ್ಲರ್ ಕೈಸೇರಿತು. ‘ಬೈ’ ರನ್ಗಾಗಿ ಯತ್ನಿಸಿದ ಕುಲದೀಪ್ ರನೌಟ್ ಆದರು.ಅಕ್ಷರ್ ಪಟೇಲ್ ಪಡೆ 8 ವಿಕೆಟ್ಗೆ 209 ರನ್ ಗಳಿಸಿ, ಓವರ್ ಪೂರೈಸಿತು.
ಇದಕ್ಕೆ ಮೊದಲು, ಲಯಕ್ಕೆ ಮರಳಿದ ಜೋಸ್ ಬಟ್ಲರ್ (52; 27ಎ) ಹಾಗೂ ನಾಯಕ ಶುಭಮನ್ ಗಿಲ್ (70; 45ಎ) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಟೈಟನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 210 ರನ್ ಗಳಿಸಿತು.










