ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ಗೆ ಇದೇ 30ರಂದು ಮೈಸೂರಿನಲ್ಲಿ ಚಾಲನೆ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.ಯೋಜನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ
ನೀಡಲಿದ್ದಾರೆ. ಕಾರ್ಯಕ್ರಮ ಸಿದ್ಧತೆ ಕುರಿತು ವೀಕ್ಷಿಸಲು ಮೈಸೂರಿಗೆ ತೆರಳುತ್ತಿದ್ದು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಯ ಸಚಿವರು, ಶಾಸಕರೊಂದಿಗೆ ಸಭೆ ನಡೆಸಲಾಗುವುದು. ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.ರಾಹುಲ್ ಗಾಂಧಿ ಅವರ ದಿನಾಂಕ ಹೊಂದಾಣಿಕೆ ದೃಷ್ಟಿಯಿಂದ ಮೈಸೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ನಿಗದಿ ಪಡಿಸಲಾಗಿದೆ ಎಂದೂ ಹೇಳಿದರು.