ಹೊಸದಿಲ್ಲಿ :ವಿಶ್ವಕಪ್ನಲ್ಲಿ ಅತಿ ವೇಗದ ಶತಕ ದಾಖಲಿಸಿದ ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಅಬ್ಬರ ಹಾಗೂ ಡೇವಿಡ್ ವಾರ್ನರ್ ಸಿಡಿಸಿದ ಸೊಗಸಾದ ಶತಕದ ನೆರವಿನಿಂದ ನೆದರ್ ಲ್ಯಾಂಡ್ಸ್ ವಿರುದ್ಧದ ವಿಶ್ಬಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್ಗಳಲ್ಲಿ
8 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿದೆ. ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 40 ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ, ವಿಶ್ವಕಪ್ ನಲ್ಲಿ ಅತೀ ವೇಗದ ಶತಕ ದಾಖಲಿಸಿದ ಸಾಧನೆ ಮಾಡಿದರು. ಈ ಹಿಂದೆ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕರಮ್ 2023 ರ ವಿಶ್ವಕಪ್ ನಲ್ಲಿ ಶ್ರೀಲಂಕಾ ವಿರುದ್ಧ 49 ಎಸೆತಗಳಲ್ಲಿ ಶತಕ ದಾಖಲಿಸಿ ಸಾಧನೆ ಮಾಡಿದ್ದರು.
ಸ್ಪೋಟಕ ಬ್ಯಾಟಿಂಗ್ ಮಾಡಿದ ಮ್ಯಾಕ್ಸ್ವೆಲ್ 44 ಎಸೆತಗಳಲ್ಲಿ 8 ಸಿಕ್ಸರ್, 9 ಬೌಂಡರಿಗಳೊಂದಿಗೆ 106 ರನ್ ಗಳಿಸಿದರು. ಬೌಂಡರಿ, ಸಿಕ್ಸರ್ ಸುರಿಮಳೆಗೈದ ಮ್ಯಾಕ್ಸ್ವೆಲ್ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಮತ್ತೊಂದು ಶತಕ ದಾಖಲಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. 93 ಎಸೆತಗಳಲ್ಲಿ 11ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ವಾರ್ನರ್ 104 ರನ್ ಗಳಿಸಿದರು. ಸ್ಟೀವನ್ ಸ್ಮಿತ್ ಹಾಗೂ ಮಾರ್ನಸ್ ಲಬುನೇಶ್ ಅರ್ಧ ಶತಕ ಸಿಡಿಸಿದರು. ಸ್ಮಿತ್ 68 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದವ 71 ರನ್ ಗಳಿಸಿದರೆ,ಲಬುನೇಶ್ 47 ಎಸೆತಗಳಲ್ಲಿ 7 ಬೌಂಡರಿ ಜಾಗೂ 2 ಸಿಕ್ಸರ್ ನೆರವಿನಿಂದ 62 ರನ್ ಚಚ್ಚಿದರು.