ಸುಳ್ಯ:ಗಣೇಶ ಚತುರ್ಥಿಯ ದಿನವಾದ ಇಂದು ವಿಘ್ನ ವಿನಾಶಕನಿಗೆ ವಿಶೇಷ ಪೂಜೆ. ನಾಡಿನೆಲ್ಲೆಡೆ ಗಣೇಶೋತ್ಸವ ಸಂಭ್ರಮ. ಸುಳ್ಯ ತಾಲೂಕು ಸೇರಿದಂತೆ ಜಲ್ಲೆಯಾದ್ಯಂತ ಇಂದು ವಿನಾಯಕ ಚೌತಿಯನ್ನು ಭಕ್ತಿ ಪೂರ್ವಕ ಆಚರಿಸಲಾಗುತಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತಿದೆ. ಮನೆಗಳಲ್ಲಿಯೂ ಆಚರಣೆ ನಡೆಯುತಿದೆ. ನಾಡಿನಾದ್ಯಂತ ಸಂಭ್ರಮ ಸಡಗರದಿಂದ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತದೆ. ಕೆಲವೆಡೆ ಇಂದು ಒಂದು ದಿನ ಮಾತ್ರ
ಗಣೇಶೋತ್ಸವ ಇದ್ದರೆ, ಕೆಲವೆಡೆ 3 ದಿನ, 5 ದಿನ, ಕೆಲವೆಡೆ 7 ದಿನಗಳ ಕಾಲ ಗಣೇಶೋತ್ಸವ ನಡೆಯುತಿದೆ.ಬೆಳಿಗ್ಗೆ ಗಣೇಶ ವಿಗ್ರಹ ಪ್ರತಿಷ್ಠೆ, ವಿಶೇಷ ಪೂಜೆ ನಡೆಯಿತು. ಭಜನೆ, ಸಾಂಸ್ಕೃತಿಕ ಸಂಭ್ರಮ ನಡೆದು ಸಂಜೆ ವೈಭವದ ಶೋಭಾಯಾತ್ರೆಯೊಂದಿಗೆ ಗಣೇಶ ವಿಗ್ರಹದ ಜಲಸ್ತಂಭನ ನಡೆಯಲಿದೆ. ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ ಸುಳ್ಯ, ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಸುಳ್ಯ ಇವುಗಳ ಆಶ್ರಯದಲ್ಲಿ 5 ದಿನಗಳ ಕಾಲ ನಡೆಯುವ 55 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಚೆನ್ನಕೇಶವ ದೇವಸ್ಥಾನದಲ್ಲಿ ಆರಂಭಗೊಂಡಿದೆ.
ಹಳೆಗೇಟು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ 3 ದಿನಗಳ ಕಾಲ ನಡೆಯುವ 40ನೇ ವರ್ಷದ ಗಣೇಶೋತ್ಸವ ನಡೆಯುತಿದೆ. ಪಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 3 ದಿನ ನಡೆಯುವ 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆರಂಭಗೊಂಡಿದೆ. ಜಟ್ಟಿಪಳ್ಳ ಶ್ರೀರಾಮ ಭಜನಾ ಸೆವಾ ಸಂಘದ ವತಿಯಿಂದ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ನಡೆಯುತಿದೆ.
ಸುಬ್ರಹ್ಮಣ್ಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ 5 ದಿನ ನಡೆಯುವ 53ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆರಂಭಗೊಂಡಿದೆ.