ಬೆಂಗಳೂರು: ಮಾನವ ಸಹಿತ ‘ಗಗನಯಾನ’ಕ್ಕೆ ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷಾ ಉಡಾವಣೆಗಳ ಪೈಕಿ ಮೊದಲ ಮಾನವರಹಿತ ಪರೀಕ್ಷಾ ವಾಹನದ ಉಡಾವಣೆ ಇದೇ 21 ರಂದು ಶ್ರೀಹರಿಕೋಟದಿಂದ ನಡೆಯಲಿದೆ. ಅಂದು ಬೆಳಿಗ್ಗೆ 7ರಿಂದ 9ರ ಮಧ್ಯೆ ಈ ಉಡಾವಣೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಗಗನಯಾನಿಗಳು ಪಾರಾಗುವ
ವ್ಯವಸ್ಥೆಯ(ಕ್ರೂ ಎಸ್ಕೇಪ್ ಸಿಸ್ಟಂ) ಪ್ರಾತ್ಯಕ್ಷಿಕೆಯೂ ಇರಲಿದೆ. ಈ ಮಾಹಿತಿಯನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯು ಇಸ್ರೊ ‘ಎಕ್ಸ್’ ಮೂಲಕ ಹಂಚಿಕೊಂಡಿದೆ.
ಈ ಕುರಿತು ಮಾತನಾಡಿರುವ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್, ಒಟ್ಟು ಮೂರು ಸರಣಿ ಪರೀಕ್ಷಾ ಉಡಾವಣೆಗಳು ನಡೆಯಲಿವೆ. ಇವುಗಳನ್ನು ಗಗನಯಾನ ಕಾರ್ಯಕ್ರಮದಡಿ ನಡೆಸಲಾಗುವುದು. ಗಗನಯಾನದ ಮೂಲಕ ಗಗನಯಾನಿಗಳನ್ನು ಭೂಮಿಯ 400 ಕಿ.ಮೀ ಕಕ್ಷೆಗೆ ಕಳುಹಿಸಿ ವಾಪಸ್ ಭೂಮಿಗೆ ಸುರಕ್ಷಿತವಾಗಿ ಕರೆತರಲಾಗುವುದು. ಈ ಮೂಲಕ ಮಾನವಸಹಿತ ಬಾಹ್ಯಾಕಾಶ ಯಾನದ ಸಾಮರ್ಥ್ಯವನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದ್ದಾರೆ.ಮುಂದಿನ ವರ್ಷದ ಕೊನೆಯ
ವೇಳೆಗೆ ಭಾರತೀಯ ಗಗನಯಾನಿಗಳನ್ನು ಬಾಹ್ಯಾಕಾಶ ನೌಕೆಯು ಹೊತ್ತೊಯ್ಯಲಿದೆ. ಇದಕ್ಕಾಗಿ ಗಗನಯಾನಿಗಳು ಕುಳಿತು ಪಯಣಿಸುವ ಕೋಶ ಅಥವಾ ‘ಕ್ರೂ ಮಾಡ್ಯೂಲ್’ನ ಪರೀಕ್ಷೆಯನ್ನು ಟಿವಿ–ಡಿ1 (ಟೆಸ್ಟ್ ವೆಹಿಕಲ್ ಡೆವಲಪ್ಮೆಂಟ್ ಫ್ಲೈಟ್)ಮೂಲಕ ನಡೆಸಲಾಗುವುದು ಎಂದು ಅವರು ವಿವರಿಸಿದರು.
ಪರೀಕ್ಷಾ ಉಡಾವಣೆಯಲ್ಲಿ ಕ್ರೂ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ಒಯ್ದು ಅದನ್ನು ವಾಪಸ್ ಭೂಮಿಗೆ ತರಲಾಗುವುದು. ಇದು ಬಂಗಾಳಕೊಲ್ಲಿಗೆ ಬಂದು ಇಳಿಯಲಿದೆ. ಅಲ್ಲಿಂದ ಕ್ರೂ ಮಾಡ್ಯೂಲ್ ಅನ್ನು ವಶಕ್ಕೆ ಪಡೆಯಲಾಗುತ್ತದೆ.