*ಎಂ.ನಾ.ಚಂಬಲ್ತಿಮಾರ್.
ಕೇರಳದ ಬೀದಿನಾಯಿಗಳೇಕೆ ಈ ಪರಿ ಕ್ರೌರ್ಯದಿಂದ ಮನುಷ್ಯರನ್ನು ಅಟ್ಟಾಡಿಸಿ ಆಕ್ರಮಿಸಿ ಕಚ್ಚುತ್ತಿವೆ…? ಇದು ಸದ್ಯಕ್ಕೆ ಉತ್ತರ ದೊರೆಯದ ಪ್ರಶ್ನೆ. ಆದರೆ ಕೇರಳದಲ್ಲಿ ಬೀದಿನಾಯಿಗಳ ಸಂಖ್ಯೆ ವಿಪರೀತ ಹೆಚ್ಚಳಗೊಂಡಿದೆ. ಅದು ರಾತ್ರಿ ಹಗಲೆಂದಿಲ್ಲದೇ ಮನುಷ್ಯರನ್ನೆಲ್ಲ ಆಕ್ರಮಿಸಿ ಇಡೀ ರಾಜ್ಯದ ನಿದ್ದೆಗೆಡಿಸಿದೆ. ಪ್ರತಿದಿನವೂ ವಯೋಮಾನ ವ್ಯತ್ಯಾಸಗಳಿಲ್ಲದೇ ಪ್ರತಿಜಿಲ್ಲೆಯಲ್ಲೂ ನೂರಾರು ಮಂದಿ ನಾಯಿ ಕಡಿತ, ಆಕ್ರಮಣಕ್ಕೊಳಗಾಗುತ್ತಾರೆ. ನಾಯಿ ಆಕ್ರಮಣದಿಂದ ವಾಹನ ಅಫಘಾತಗಳೂ ಸಂಭವಿಸಿವೆ. ಪ್ರಾಣಹಾನಿಯೂ ಆಗಿವೆ. ನಾಡಿನ ನೆಮ್ಮದಿಯನ್ನೇ ಕದಡಿಸಿದ ನಾಯಕಾಟ ಮನುಷ್ಯ ಬದುಕಿಗೆ ಸವಾಲಾಗಿದೆ. ಈ ಸುದ್ದಿ ಈಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿತವಾಗಿದೆ. ಬೀದಿನಾಯಿಗಳೆಲ್ಲ
ಮಾಧ್ಯಮಗಳಲ್ಲಿ ಕಾಣಿಸಿಕೊಂಡು, ಅದರ ವಿಷಯವೇ ಚರ್ಚೆಯಾಗಿ “ನಾಯಿಗಳಿಗೂ ಒಂದು ದಿನ ಬಂದಿದೆ ಎನ್ನುವಂತೆ ಅವೆಲ್ಲಾ ಈಗ ತಾರಪದವಿಗೇರಿದೆ!
ಬೀದಿನಾಯಿಗಳು ಈ ಪರಿ ಹೆಚ್ಚಿದ್ದು ಹೇಗೆ..?
ಕಳೆದ ಕೊರೋನಾ ದಿಗ್ಬಂಧನದ ಕಾಲದಲ್ಲಿ ಬೀದಿನಾಯಿಗಳು ವ್ಯಾಪಕ ಮರಿ ಇಟ್ಟು ಸಂಖ್ಯೆ ವೃಧ್ದಿಸಿಕೊಂಡವು ಎನ್ನಲಾಗುತ್ತದೆ. ಬೀದಿಯಲ್ಲೇ ಬೆಳೆದ ಅವೆಲ್ಲ ತಿಂದುಂಡು ಸೊಕ್ಕಿ ಕೊಬ್ಬಿದೆ, ಬಲಿಷ್ಟವಾಗಿದೆ. ಇದು ಯಾರನ್ನು ಯಾವಾಗ ಆಕ್ರಮಿಸುತ್ತದೆ ಎನ್ನುವಂತಿಲ್ಲ. ಮಕ್ಕಳನ್ನು, ಮಹಿಳೆಯರನ್ನು, ನಡೆದಾಡುವವರನ್ನಷ್ಟೇ ಅಲ್ಲ ಬೈಕ್, ಸ್ಕೂಟರ್ ಸವಾರರನ್ನು, ರಿಕ್ಷಾ ಸವಾರನ್ನೂ ಬಿಡದೆ ಛಂಗನೆ ಹಾರಿ ಆಕ್ರಮಿಸುತ್ತಿವೆ. ಇಂಥ ಆಕ್ರಮಣಗಳಿಂದ ತಪ್ಪಿಸುವ ಪ್ರಯತ್ನದಲ್ಲಿ ವಾಹನ ಅಫಘಾತ ನಡೆದು ಗಾಯಗೊಂಡವರು, ಮಡಿದವರು ಕಡಿಮೆಯೇನಲ್ಲ. ಇದರಿಂದಾಗಿ ನಾಗರಿಕರು ಸಹಜವಾಗಿಯೇ ಬೀದಿನಾಯಿಗಳ ವಿರುದ್ಧ ವ್ಯಗ್ರರಾಗಿದ್ದಾರೆ. ಅವರ ಮುಂದೆ ಪ್ರಾಣಿ ಪ್ರೀತಿಯ ಮಾತೆತ್ತಿದರಂತೂ ಅವರು ಮತ್ತೂ ಕೆಂಡಾಮಂಡಲವಾಗುತ್ತಾರೆ. ಕಾರಣ ನಾಯಿ ಕಾಟದ ಸಮಸ್ಯೆ ಅನುಭವಿಸಿದ ಬಲಿಪಶುಗಳವರು ತಾನೇ..?
ಇಷ್ಟಕ್ಕೂ ಬೀದಿ ನಾಯಿಗಳನ್ನು ಏಕಾಏಕಿ ಕೊಲ್ಲುವಂತಿಲ್ಲ, ಕೊಲ್ಲಲೂಬಾರದು. ಅದನ್ನು ಸಂತಾನಹರಣಗೊಳಿಸಿ ಅವಕ್ಕೆ ಪ್ರತ್ಯೇಕ ವಾಸವ್ಯವಸ್ಥೆಗೊಳಿಸಬೇಕಾದುದು ಸ್ಥಳೀಯಾಡಳಿತ ಸಂಸ್ಥೆಯ ಕಾಯಕ. ಆದರೆ ಈ ಕುರಿತಾದ ಗೋಜಿಗೆ ಹೋಗದ ಕೇರಳದ ಸ್ಥಳಿಯಾಡಳಿತ ಇಲಾಖೆ ಇದೀಗ ಸಮಸ್ಯೆ ಉಲ್ಬಣಿಸಿದಾಗ ತಲೆ ತುರಿಸಿದೆ. ಕೇರಳದ
ಯಾವುದೇ ಬೀದಿಯಲ್ಲಿ ಗಮನಿಸಿದರೂ ಸಾಕು ಹಿಂಡು, ಹಿಂಡು ಬೀದಿ ನಾಯಿಗಳ ದಂಡು ಕಾಣುತ್ತವೆ. ಆದರೆ ಅವುಗಳೇಕೆ ಈ ಪರಿ ಆಕ್ರಮಣ ಶೀಲತೆಯನ್ನು ರೂಢಿಸಿಕೊಂಡಿದೆ ಎಂಬುದೇ ಪ್ರಶ್ನೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಬೀದಿ ಇದೆ, ಅಲ್ಲಿ ಬೀದಿನಾಯಿಗಳೂ ಇವೆ. ಆದರೆ ಅವ್ಯಾವುದೂ ಈ ಪರಿ ಗುಂಪುಗೂಡಿ ಕ್ರೌರ್ಯದಿಂದ ಮನುಷ್ಯರ ಮೇಲೆ ಆಕ್ರಮಣ ಎಸಗುತ್ತಿಲ್ಲ ತಾನೇ..?
ಆದರೆ ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳು ವ್ಯಾಪಕ ಆಕ್ರಮಣಕಾರಿಯಾಗಿದೆ. ದಿಢೀರ್ ಉಲ್ಬಣಿಸಿದ ಈ ಸಮಸ್ಯೆ ಈಗ ರಾಷ್ಟ್ರೀಯ ಗಮನ ಸೆಳೆದಿದೆ. ಅನೇಕ ಕಡೆ ಬೀದಿ ನಾಯಿಗಳನ್ನು ನಾಗರಿಕರೇ ಕೊಂದ ಹಿನ್ನೆಲೆಯಲ್ಲಿ ಪ್ರಾಣಿ ಪ್ರಿಯರು ಪ್ರತಿಭಟಿಸಿದ್ದಾರೆ. ಕ್ರಿಕೆಟಿಗ ಕೆ.ಎಲ್. ರಾಹುಲ್ ಸಹಿತ ಅನೇಕರು ಬೀದಿ ನಾಯಿಗಳನ್ನು ಕೊಲ್ಲದಿರಿ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಬೀದಿಗಳೆಲ್ಲ ನಾಯಿಗಳದೇ ಸಾಮ್ರಾಜ್ಯವಾಗಿರುವ ಹಿನ್ನೆಲೆಯಲ್ಲಿ ಮತ್ತು ಅವುಗಳ ಆಕ್ರಮಣ ಮಿತಿಮೀರಿರುವುದರಿಂದ ಸರಕಾರಕ್ಕಿದೊಂದು ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಜಿಲ್ಲಾಡಳಿತವೂ
ಪಂಚಾಯತ್ ಮುಖೇನ ಮೊದಲ ಹಂತದಲ್ಲಿ ಸಾಕುನಾಯಿಗಳಿಗೆ ಲೈಸನ್ಸ್ ನೀಡಲಾರಂಭಿಸಿದೆ. ಲೈಸನ್ಸ್ ಇಲ್ಲದ ಬೀದಿ ನಾಯಿಗಳನ್ನು ಸಂತಾನಹರಣಗೊಳಿಸಲಾಗುತ್ತದೆ. ಬಳಿಕ ಜಿಲ್ಲೆಯ ನಿರ್ದಿಷ್ಟ ಕೇಂದ್ರಗಳಲ್ಲಿ ಅವಕ್ಕೆ ವಾಸದ ಕೋಣೆಯೊದಗಿಸಲೂ ಮುಂದಾಗಿದೆ. ಆದರೆ ಬೀದಿಯಲ್ಲೇ ಉಂಡಾಡಿ ಬೆಳೆದ ನಾಯಿಗಳು ಗೂಡೊಳಗೆಯೋ, ಕೋಣೆಯಲ್ಲೋ ವಾಸಿಸಬಹುದೇ…? ಕೋಣೆಯಲ್ಲಿ ಹಾಕಿದರೆ ಪರಸ್ಪರ ಅವುಗಳೇ ಕಚ್ಚಾಡಬಹುದಲ್ಲವೇ..?
ಸಮಸ್ಯೆಯಂತೂ ಸಂಕೀರ್ಣ. ಕೇರಳದಲ್ಲೀಗ ನಾಯಿಕಡಿತಕ್ಕೊಳಗಾದವರು ಒಬ್ಬಿಬ್ಬರೇನಲ್ಲ. ಪ್ರತಿ ಜಿಲ್ಲೇಯಲ್ಲೂ ಸಾವಿರಾರು ಮಂದಿ. ಅವರೆಲ್ಲರದ್ದೂ ವಿಭಿನ್ನ ಕತೆಗಳು. ಆದರೆ ಬೇರ್ಯಾವ ರಾಜ್ಯದಲ್ಲೂ ಬೀದಿ ನಾಯಿ ಉಲ್ಬಣಿಸಿ ಅದು ಮನುಷ್ಯರನ್ನೆಲ್ಲ ಆಕ್ರಮಿಸಿದ್ದಿಲ್ಲ. ಆದರೆ ಕೇರಳದಲ್ಲಿ ಕೆರಳಿರುವ ನಾಯಿಗಳಿಂದಾಗಿ ಮನುಷ್ಯರಿಗೆ ಮನೆಯಿಂದ ಹೊರಗಿಳಿಯಲಾಗದ, ನೆಮ್ಮದಿಯ ಕಾಲ್ನಡಿಗೆ ಮಾಡಲಾಗದ ಪರಿಸ್ಥಿತಿ ಬಂದೊದಗಿದೆ. ಈ ನಾಯಿಗಳನ್ನೆಲ್ಲ ಶಾಂತಗೊಳಿಸಿ, ಸಾಧುಗಳನ್ನಾಗಿಸುವುದು ಹೇಗೆ..? ಅವುಗಳನ್ನು ಅದರ ಸಹಜ ಸ್ವಭಾವದಂತೆ ಸ್ವಾಮಿನಿಷ್ಠ ಮತ್ತು ಕೃತಜ್ಞತೆಯ ಒಲವಿನ ಪ್ರಾಣಿಯನ್ನಾಗಿಸುವುದು ಹೇಗೆ..?
ತಮಾಷೆಯಂತೆ ಕಂಡರೂ ಚಿಂತಿಸಬೇಕಾದ ವಿಚಾರ. ಏಕೆಂದರೆ ಇದು ಕೇವಲ ನಾಯಿ ಕಡಿತವಷ್ಟೇ ಅಲ್ಲ, ನಾಯಿ ಕಡಿತಕ್ಕೊಳಗಾದವರಿಗೂ, ಅಲ್ಲದೇ ಇರುವವರಲ್ಲೂ, ಜಾನುವಾರುಗಳಲ್ಲೂ ಕೇರಳದ ಅನೇಕ ಕಡೆ ಹುಚ್ಚು ನಾಯಿ ಕಡಿತಕ್ಕೊಳಗಾದ ರೇಬಿಸ್ ರೋಗಲಕ್ಷಣಗಳೂ ಪ್ರತ್ಯಕ್ಷವಾಗಿದೆ.
ಮಾಧ್ಯಮ ಕ್ಷೇತ್ರದಲ್ಲೊಂದು ತಮಾಷೆಯ ಪದ ಬಳಕೆ ಇದೆ. ಅದೇನೆಂದರೆ “ನಾಯಿ ಮನುಷ್ಯನಿಗೆ ಕಚ್ಚಿದರೆ ಅದು ಸುದ್ದಿಯಲ್ಲ. ಕಚ್ಚುವುದು ನಾಯಿಯ ಸ್ವಭಾವ. ಆದರೆ ಮನುಷ್ಯ ನಾಯಿಗೆ ಕಚ್ಚಿದರೆ ಅದೇ
ಸುದ್ದಿ” ಎಂಬುದು. ಪ್ರಸ್ತುತ ಕೇರಳದಲ್ಲಿ ಬೀದಿ ನಾಯಿಕಾಟದ ವಿರುದ್ಧ ವ್ಯಗ್ರರಾಗಿರುವ ನಾಗರಿಕರು ಹಾಗೆ ಮಾಡಲಾರರು ಅನ್ನಿಸುತ್ತದೆ.
(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು)