ಪಲ್ಲೆಕೆಲೆ: ನಾಯಕ ಹ್ಯಾರಿ ಬ್ರೂಕ್ (100, 51 ಎಸೆತ) ಅವರು ಆಕರ್ಷಕ ಶತಕದ ನೆರವಿನಿಂದ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎರಡು ವಿಕೆಟ್ಗಳಿಂದ ಸೋಲಿಸಿದ ಇಂಗ್ಲೆಂಡ್ ಸೆಮಿಫೈನಲ್ಗೆ ಪ್ರವೇಶಿಸಿತು. ಇಂಗ್ಲೆಂಡ್ ತಂಡವು (2016ರಿಂದ) ಟಿ20 ವಿಶ್ವಕಪ್ನಲ್ಲಿ ಸತತ ಐದನೇ ಬಾರಿ ನಾಲ್ಕರ ಘಟ್ಟ ಪ್ರವೇಶಿಸಿದ ದಾಖಲೆಯನ್ನೂ ಬರೆಯಿತು. ಇನ್ನೊಂದೆಡೆ
ಪಾಕಿಸ್ತಾನದ ಸೆಮಿಫೈನಲ್ ಕನಸು ಬಹುತೇಕ ಕಮರಿತು. ನ್ಯೂಜಿಲೆಂಡ್ ವಿರುದ್ಧ ಈ ತಂಡದ ಮೊದಲ ಪಂದ್ಯ ಮಳೆಗೆ ಕೊಚ್ಚಿಹೋಗಿತ್ತು. ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ಜಂಟಿ ಆತಿಥೇಯ ಶ್ರೀಲಂಕಾ ವಿರುದ್ಧ ಸುಲಭ ಜಯಗಳಿಸಿದ್ದು, ಒಟ್ಟು 4 ಪಾಯಿಂಟ್ಸ್ ಗಳಿಸಿದೆ.
165 ರನ್ಗಳ ಗುರಿ ಎದುರಿಸಿದ ಇಂಗ್ಲೆಂಡ್ ಒಂದು ಹಂತದಲ್ಲಿ 58 ರನ್ಗಳಾಗುಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಬ್ರೂಕ್, ಸ್ಯಾಮ್ ಕರನ್ (16) ಜೊತೆಗೂಡಿ ಐದನೇ ವಿಕೆಟ್ಗೆ ಕ್ಷಿಪ್ರಗತಿಯಲ್ಲಿ 45 ರನ್ ಸೇರಿಸಿದ್ದರಿಂದ ತಂಡ ಗಮನಾರ್ಹವಾಗಿ ಚೇತರಿಸಿತು. ನಂತರ ಇನ್ನೊಬ್ಬ ಆಲ್ರೌಂಡರ್ ವಿಲ್ ಜಾಕ್ಸ್ (28, 23 ಎಸೆತ) ಜೊತೆ 52 ರನ್ಗಳ ನಿರ್ಣಾಯಕ ಜೊತೆಯಾಟದಲ್ಲಿ ಪಾಲ್ಗೊಂಡಿದ್ದು ಪಂದ್ಯವನ್ನು ಇಂಗ್ಲೆಂಡ್ ಕಡೆ ವಾಲಿಸಿತು. ಬ್ರೂಕ್ ಆಟದಲ್ಲಿ 10 ಬೌಂಡರಿ, 4 ಸಿಕ್ಸರ್ಗಳಿದ್ದವು.
ಬ್ರೂಕ್ ನಿರ್ಗಮನದ ನಂತರ ಇಂಗ್ಲೆಂಡ್ ಎರಡು ವಿಕೆಟ್ ಬೇಗ ಕಳೆದುಕೊಂಡಿತು. ಕೊನೆಯಲ್ಲಿ ಜೋಫ್ರಾ ಆರ್ಚರ್ ಗೆಲುವಿನ ಬೌಂಡರಿ ಬಾರಿಸಿದರು. ಇಂಗ್ಲೆಂಡ್ 8 ವಿಕೆಟ್ಗೆ 166 ರನ್ ಗಳಿಸಿ ಗೆಲುವಿನ ನಗೆ ಬೀರಿತು.







