ಸುಳ್ಯ:ಡಾ.ರೇಣುಕಾ ಪ್ರಸಾದ್ ಅವರ ನೇತೃತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ನಾವು ಮುಂದೆಯೂ ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಷನ್ನ ಸದಸ್ಯೆ ಡಾ.ಜ್ಯೋತಿ ಆರ್ ಪ್ರಸಾದ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಅನೇಕ ವರ್ಷಗಳಿಂದ ನಮ್ಮ ಎಲ್ಲಾ ವಿದ್ಯಾಸಂಸ್ಥೆಗಳನ್ನು ಯಾವುದೇ ಆಡಳಿತಾತ್ಮಕ ಚ್ಯುತಿ ಬಾರದಂತೆ
ಅಚ್ಚು ಕಟ್ಟಾಗಿ ನಡೆಸುತ್ತಾ ಬಂದಿದ್ದೇವೆ. ಈಗ ಡಾ.ರೇಣುಕಾಪ್ರಸಾದ್ ಅವರಿಗೆ ಶಿಕ್ಷೆ ಆಗಿರುವ ಹಿನ್ನಲೆಯಲ್ಲಿ ಅತೀವ ನೋವಿನಲ್ಲಿದ್ದೇವೆ. ಈ ಸಂದರ್ಭದಲ್ಲಿ ಅಕಾಡೆಮಿಯ ಪದಾಧಿಕಾರಿಗಳು ನಮ್ಮ ಆಡಳಿತಾಧಿಕಾರದಲ್ಲಿ ಇರುವ ಪಾಲಿಟೆಕ್ನಿಕ್ ಕಾಲೇಜಿಗೆ ಬಂದು ಸಂಸ್ಥೆಯ ಲೆಕ್ಕಪತ್ರ ಮತ್ತು ದಾಖಲೆಗಳನ್ನು ಕೇಳಿದ್ದಾರೆ. ಇದರಿಂದ ಸಂಸ್ಥೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಗೊಂದಲಕ್ಕೆ ಈಡಾಗಿದ್ದಾರೆ ಎಂದು ಹೇಳಿದರು. ನಾವು ಕೂಡ ಅಕಾಡೆಮಿಯ ಆಡಳಿತಾತ್ಮಕ ಪಾಲುದಾರರಾಗಿದ್ದು ಡಾ.ರೇಣುಕಾಪ್ರಸಾದ್ ಅವರ ನೇತೃತ್ವದಲ್ಲಿ ಇದ್ದ
ಎಲ್ಲಾ ಸಂಸ್ಥೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸಿದ್ದೇವೆ. ಈ ಸಂಸ್ಥೆಗಳನ್ನು ಇನ್ನು ಮುಂದೆಯೂ ವ್ಯವಸ್ಥಿತವಾಗಿ ಮುನ್ನಡೆಸುತ್ತೇವೆ ಎಂದ ಜ್ಯೋತಿ ಆರ್ ಪ್ರಸಾದ್ ರೇಣುಕಾಪ್ರಸಾದ್ ಅವರಿಗೆ ಹೈಕೋರ್ಟ್ ಶಿಕ್ಷೆ ವಿಧಿಸಿದರುವುದರ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ನಮನವಿ ಸಲ್ಲಿಸುತ್ತೇವೆ. ಅಲ್ಲಿ ಅವರು ದೋಷ ಮುಕ್ತರಾಗಿ ಬರುವ ವಿಶ್ವಾಸ ಇದೆ ಎಂದು ಹೇಳಿದರು. ನಮ್ಮ ಎಲ್ಲಾ ಸಂಸ್ಥೆಗಳ ಪ್ರಾಂಶುಪಾಲರನ್ನು ಕರೆದು ನೈತಿಕ ಬಲ ತುಂಬಿ ಮುಂದೆಯೂ ಈ ಸಂಸ್ಥೆಗಳು ವ್ಯವಸ್ಥಿತವಾಗಿ ಮುನ್ನಡೆಯಲಿದೆ ಎಂದು ಧೈರ್ಯ ತುಂಬಿದ್ದೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಅಭಿಜ್ಞಾ ಆರ್. ಪ್ರಸಾದ್ ಉಪಸ್ಥಿತರಿದ್ದರು.