ಸುಳ್ಯ:ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶೈಲೇಶ್ ಅಂಬೆಕಲ್ಲು ಆಯ್ಕೆಯಾಗಿದ್ದಾರೆ. ಇಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಶೈಲೇಶ್ ಅಂಬೆಕಲ್ಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಚುನಾವಣೆ ಘೋಷಣೆಯಾಗಿದ್ದರೂ ಅಧ್ಯಕ್ಷರ ಆಯ್ಕೆ ನಡೆಯದ ಕಾರಣ ತೀವ್ರ ಕುತೂಹಲ ಕೆರಳಿಸಿದ್ದ ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ಮೂರನೇ ಬಾರಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆದಿದೆ.ಈ ಹಿಂದೆ ಎರಡು ಬಾರಿ
ಅಧ್ಯಕ್ಷ ಆಯ್ಕೆಗೆ ದಿನ ನಿಗದಿಯಾಗಿದ್ದರೂ ಅಧ್ಯಕ್ಷತೆಗೆ ನಾಮಪತ್ರ ಸದಸ್ಯರು ಸಲ್ಲಿಸಿ ಹಿಂಪಡೆದ ಕಾರಣ ಅಧ್ಯಕ್ಷರ ಆಯ್ಕೆ ನಡೆದಿರಲಿಲ್ಲ. ಈ ಹಿನ್ನಲೆಯಲ್ಲಿ ಮೂರನೇ ಬಾರಿಗೆ ಅ.4 ರಂದು ದಿನ ನಿಗದಿಯಾಗಿತ್ತು. ಅಧ್ಯಕ್ಷತೆಗೆ ಹಿಂದುಳಿದ ವರ್ಗ ಎ ವಿಭಾಗಕ್ಕೆ ಮೀಸಲಾಗಿತ್ತು. ಆದರೆ ಹಿಂದುಳಿದ ವರ್ಗ ಎ ವಿಭಾಗದವರು ಎರಡು ಬಾರಿ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದರೂ
ಹಿಂಪಡೆದಿದ್ದರು. ಇಂದು ನಡೆದ ಚುನಟವಣಾ ಪ್ರಕ್ರಿಯೆಯಲ್ಲಿ ಹಿ.ವ.(ಎ) ವಿಭಾಗದ ಸದಸ್ಯರು ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಇದರಿಂದ ಪಂಚಾಯತ್ ರಾಜ್ ಅಧಿನಿಯಮ ಪ್ರಕಾರ ಹಿಂದುಳಿದ ವರ್ಗ ಬಿ ಸದಸ್ಯರಿಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದ ಹಿನ್ನೆಲೆಯಲ್ಲಿ ಶೈಲೇಶ್ ಅಂಬೆಕಲ್ಲು ನಾಮಪತ್ರ ಸಲ್ಲಿಸಿದ್ದರು.ಅಧ್ಯಕ್ಷತೆಗೆ ಒಬ್ಬರೇ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಶೈಲೇಶ್ ಅಂಬೆಕಲ್ಲು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿದ್ದ ತೋಟಗಾರಿಕಾ ಇಲಾಖೆಯ ಅಧಿಕಾರಿ ಅರಬಣ್ಣ ಪೂಜೇರಿ ತಿಳಿಸಿದ್ದಾರೆ. ಗ್ರಾ.ಪಂ.ಉಪಾಧ್ಯಕ್ಷೆ ಲೀಲಾವತಿ ಸೇವಾಜೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.