ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 20 ರನ್ಗಳ ಗೆಲುವು ಸಾಧಿಸಿತು.ಡೆಲ್ಲಿ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಗಳಿಗೆ 221 ರನ್ ಗಳಿಸಿತು. ರಾಜಸ್ಥಾನ 20ಓವರ್ಗಳಲ್ಲಿ 8 ವಿಕೆಟ್ಗೆ 201 ರನ್ ಬಾರಿಸಿತು.
ರಾಯಲ್ಸ್ ಪರ ನಾಯಕ ಸಂಜು ಸ್ಯಾಮ್ಸನ್ (86; 46ಎ) ಏಕಾಂಗಿಯಾಗಿ
ನಡೆಸಿದ ಹೋರಾಟ ವ್ಯರ್ಥವಾಯಿತು. ಸಂಜು ಬ್ಯಾಟ್ನಿಂದ ಎಂಟು ಬೌಂಡರಿ ಮತ್ತು ಆರು ಭರ್ಜರಿ ಸಿಕ್ಸರ್ಗಳು ಬಂದವು. ಜೋಸ್ ಬಟ್ಲರ್ (19), ರಿಯಾನ್ ಪರಾಗ್ (27; 22ಎ), ಶುಭಂ ದುಬೆ (25; 12ಎ) ಹೆಚ್ಚು ಪ್ರತಿರೋಧ ತೋರಲಿಲ್ಲ. ರೋವ್ಮನ್ ಪೊವೆಲ್ (13), ಡೊನೊವನ್ ಫೆರೆರಾ (1) ನಿರಾಸೆ ಮೂಡಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಆಸ್ಟ್ರೇಲಿಯಾದ ಯುವಪ್ರತಿಭೆ ಜೇಕ್ ಫ್ರೇಸರ್ ಮೆಕ್ಗುರ್ಕ್ (50; 20ಎ, 4X7, 6X3) ಹಾಗೂ ಅಭಿಷೇಕ್ ಪೊರೆಲ್ (65; 36ಎ, 4X7, 6X3) ಮೊದಲ ವಿಕೆಟ್ಗೆ ನಾಲ್ಕು ಓವರ್ಗಳಲ್ಲಿ 60 ರನ್ ಸೇರಿಸಿದರು. ಟ್ರಿಸ್ಟನ್ ಸ್ಟಬ್ಸ್ (41; 20ಎ, 4X3, 6X3) ಹಾಗೂ ಪದಾರ್ಪಣೆ ಪಂದ್ಯ ಆಡಿದ ಗುಲ್ಬದೀನ್ ನೈಬ್ (19; 15ಎ, 4X1, 6X1) ಮಹತ್ವದ ಕಾಣಿಕೆ ನೀಡಿದರು. ಅವರ ಬೀಸಾಟದ ನೆರವಿನಿಂದ ಕೊನೆಯ ಐದು ಓವರ್ಗಳಲ್ಲಿ ತಂಡದ ಮೊತ್ತಕ್ಕೆ 65 ರನ್ಗಳು ಹರಿದು ಬಂದವು.
ಈ ಗೆಲುವಿನೊಂದಿಗೆ ಡೆಲ್ಲಿ ತಂಡವು ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ರಿಷಭ್ ಪಂತ್ ಬಳಗವು 12 ಅಂಕ ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ ಆರರಿಂದ ಐದನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಸಂಜು ಸ್ಯಾಮ್ಸನ್ ಪಡೆ ಆಡಿರುವ 11 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಕೋಲ್ಕತ್ತ ನೈಟ್ ರೈಸರ್ಸ್ ತಂಡವು ಅಗ್ರಸ್ಥಾನ ಕಾಯ್ದುಕೊಂಡಿದೆ.