ಲಖನೌ: ಐಪಿಎಲ್ನಲ್ಲಿ ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) 5 ವಿಕೆಟ್ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಲಖನೌ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 166 ರನ್ ಕಲೆಹಾಕಿತು.ಗುರಿ ಬೆನ್ನತ್ತಿದ ಚೆನ್ನೈ 19.3 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ ಗೆಲುವಿನ ನಗೆ ಬೀರಿತು.ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ದೀರ್ಘ ಕಾಲದ ನಂತರ
ಫಿನಿಷರ್ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದರು. ಶಿವಂ ದುಬೆ (43, 37ಎ) ಜೊತೆ ಮುರಿಯದ ಆರನೇ ವಿಕೆಟ್ಗೆ ಉಪಯುಕ್ತ ಜೊತೆಯಾಟವಾಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನ ಹಳಿಗೆ ಮರಳಿಸಿದರು. ಆವೇಶ್ ಖಾನ್ ಮಾಡಿದ ಕೊನೆಯ ಓವರಿನ ಮೂರನೇ ಎಸೆತವನ್ನು ದುಬೆ ಬೌಂಡರಿಗೆ ಅಟ್ಟಿ ಗೆಲುವನ್ನು ಪೂರೈಸಿದರು. ಕೀಪಿಂಗ್ನಲ್ಲೂ ಮಿಂಚಿದ್ದ ಧೋನಿ 11 ಎಸೆತಗಳಲ್ಲಿ ಅಜೇಯ 26 ರನ್ (4×4, 6×1) ಬಾರಿಸಿದರು. ದುಬೆ ಜೊತೆ ಮುರಿಯದ ಆರನೇ ವಿಕೆಟ್ಗೆ ಹರಿದುಬಂದ 57 ರನ್ಗಳು ತಂಡವನ್ನು ದಡ ಸೇರಿಸಿದವು. ಸ್ಪಿನ್ನರ್ಗಳಾದ ರವಿ ಬಿಷ್ಣೋಯಿ (2ವಿಕೆಟ್) ಮತ್ತು ದಿಗ್ವೇಶ್ ರಾಠಿ (1) ಅವರು ಒಂದು ಹಂತದಲ್ಲಿ ಚೆನ್ನೈ ತಂಡವನ್ನು 15 ಓವರುಗಳ ಬಳಿಕ 5 ವಿಕೆಟ್ಗೆ 111 ರನ್ಗಳಿಗೆ ನಿಯಂತ್ರಿಸಿದ್ದರು. ಆದರೆ ದುಬೆ ಜೊತೆಗೂಡಿದ ಧೋನಿ ಈ ಬಾರಿ ನಿರಾಸೆಗೊಳಿಸಲಿಲ್ಲ. ಶೇಖ್ ರಷೀದ್ 27, ರಚಿನ್ ರವೀಂದ್ರ 37, ಶಿವಂ ದುಬೆ ಔಟಾಗದೇ 43, ಎಂ.ಎಸ್.ಧೋನಿ ಔಟಾಗದೇ 26 ಬಾರಿಸಿದರು. ಲಖನೌ ಪರ
ಪಂತ್ ಅರ್ಧ ಶತಕ ದಾಖಲಿಸಿದರು. ಮಿಚೆಲ್ ಮಾರ್ಷ್ 30, ರಿಷಭ್ ಪಂತ್ 63, ಆಯುಷ್ ಬಡೋನಿ 22, ಅಬ್ದುಲ್ ಸಮದ್ 20 ರನ್ ಬಾರಿಸಿದರು.





