ಸುಳ್ಯ: ಸುಳ್ಯ ತಾಲೂಕಿನ ವಿವಿಧ ಗ್ರಾಮಗಳು ಹಾಗು ಗಡಿ ಗ್ರಾಮಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ಒಂದೆರಡು ದಿನಗಳಿಂದ ಗ್ರಾಮೀಣ ಭಾಗದಲ್ಲಿ ತೀವ್ರ ಚಳಿಯ ಅನುಭವ ಉಂಟಾಗುತ್ತಿದ್ದು ಜನರು ಚಳಿಯಿಂದ ಗಡ ಗಡ ನಡುಗುತ್ತಿದ್ದಾರೆ. ಶನಿವಾರ ರಾತ್ರಿ, ಭಾನುವಾರ ಬೆಳಗ್ಗೆ ಭಾರೀ ಚಳಿ ಉಂಟಾಗಿತ್ತು. ಬೆಳಗ್ಗಿನ ಜಾವ ಎಲ್ಲೆಡೆ ಮಂಜು
ಮುಸುಕಿದ ವಾತಾವರಣ ಹಾಗು ಗಡ ಗಡ ನಡುಗುವ ಚಳಿ ಇತ್ತು. ಡಿಸೆಂಬರ್ ಕೊನೆಯ ವಾರ ಹಾಗು ಜನವರಿ ಮೊದಲ ವಾರದಲ್ಲಿ ಸ್ವಲ್ಪ ಚಳಿಯ ವಾತಾವರಣ ಕಂಡು ಬಂದಿತ್ತು. ಆದರೆ ಬಳಿಕ ಮೋಡ ಕವಿದ ವಾತಾವರಣ, ತುಂತುರು ಮಳೆ ಇದ್ದ ಕಾರಣ ಚಳಿ ದೂರವಾಗಿತ್ತು.ಇದೀಗ ಮತ್ತೆ ಚಳಿಯ ವಾತಾವರಣ ಕಂಡು ಬಂದಿದೆ.ಉತ್ತರ ಭಾರತದಿಂದ
ದಕ್ಷಿಣದೆಡೆಗೆ ಗಾಳಿ ಬೀಸುತ್ತಿರುವ ಪರಿಣಾಮ ರಾಜ್ಯದ ಕೆಲವೆಡೆ ಮುಂದಿನ ಕೆಲ ದಿನಗಳ ಕಾಲ ಚಳಿಯ ವಾತಾವರಣ ಇರಲಿದ್ದು, ವಾಡಿಕೆಗಿಂತ 3- 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಡಿಮೆ ದಾಖಲಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಕೆಲ ದಿನ ಮುಂದುವರಿಯುವ ಸೂಚನೆ ಇದೆ.