ಸುಳ್ಯ:ವಿಧಾನ ಸಭಾ ಚುನಾವಣೆಯ ಬಳಿಕ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಹಿನ್ನಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ಕೆಲವು ಕಾಂಗ್ರೆಸ್ ಮುಖಂಡರಿಗೆ ಶೋಕಾಸ್ ನೀಡಿರುವ ಮತ್ತು ಕೆಲವರನ್ನು ಅಮಾನತು ಮಾಡಿರುವ ಆದೇಶ ಮುಗಿದ ಅಧ್ಯಾಯ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗೆ
ಉತ್ತರಿಸುತ್ತಾ ಈ ರೀತಿ ಹೇಳಿದರು. ಎಂ.ವೆಂಕಪ್ಪ ಗೌಡ ಸೇರಿ ಕೆಲವು ಪ್ರಮುಖರಿಗೆ ಕೆಪಿಸಿಸಿ ಶಿಸ್ತು ಸಮಿತಿಯಿಂದ ಶೋಕಾಸ್ ನೋಟೀಸ್, ಅಮಾನತು ಆದೇಶ ಬಂದದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಉತ್ತರಿಸಿದ ಅವರು ಅಮಾನತು, ಶೋಕಾಸ್ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಾಗ ಅದನ್ನು ಹಿಂಪಡೆಯಲು ಡಿ.ಕೆ.ಶಿವಕುಮಾರ್ ಅವರೇ ಸೂಚನೆ ನೀಡಿದ್ದಾರೆ. ಈಗ ಸುಳ್ಯ ಕಾಂಗ್ರೆಸ್ನಲ್ಲಿ ಎಲ್ಲರೂ ಒಟ್ಟಾಗಿದ್ದಾರೆ. ಪಕ್ಷ ಸಂಘಟನೆಗಾಗಿ, ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆ.ಗೋಕುಲ್ದಾಸ್, ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರಾ ಕ್ರಾಸ್ತಾ, ಪ್ರಮುಖರಾದ ಶಶಿಶರ ಎಂ.ಜೆ, ಭವಾನಿಶಂಕರ ಕಲ್ಮಡ್ಕ, ಸತ್ಯಕುಮಾರ್ ಆಡಿಂಜ ಉಪಸ್ಥಿತರಿದ್ದರು.