ಸುಳ್ಯ:ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಎಲ್ಲರೂ ಮೆಚ್ಚುವ ಸಮತೋಲನದ ಬಜೆಟ್ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಶ್ಲಾಘಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ರಾಜ್ಯದಲ್ಲಿ ಇರುವುದು ನುಡಿದಂತೆ ನಡೆಯುವ ಸರಕಾರ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸುವತ್ತ ದಿಟ್ಟ ಹೆಜ್ಜೆ ಇರಿಸಿದೆ.ಗ್ಯಾರಂಟಿಗಳ
ಅನುಷ್ಠಾನಕ್ಕೆ 52 ಸಾವಿರ ಕೋಟಿಗಳನ್ನು ಮೀಸಲಿರಿಸಿದೆ.ಶಕ್ತಿ ಯೋಜನೆ, ಅನ್ನ ಭಾಗ್ಯ,ಗೃಹಜ್ಯೋತಿ, ಈಗಾಗಲೇ ಜಾರಿ ಮಾಡಿದೆ.ಉಳಿದ ಎರಡು ಗ್ಯಾರಂಟಿಗಳನ್ನು ಶೀಘ್ರ ಅನುಷ್ಠಾನ ಮಾಡಲಿದೆ. ಬಜೆಟ್ ಶೇ.90 ಜನರಿಗೆ ನೇರವಾಗಿ ಪ್ರಯೋಜನಕಾರಿಯಾಗಲಿದೆ. ಕೃಷಿಕರಿಗೆ, ಮಹಿಳೆಯರಿಗೆ, ಹಿಂದುಳಿದ ವರ್ಗದವರಿಗೆ, ಅಲ್ಪ ಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ಹೀಗೆ ಎಲ್ಲರ ಅಭಿವೃದ್ಧಿಗೆ ಬಜೆಟ್ ವಿಶೇಷ ಆದ್ಯತೆ ನೀಡಿದೆ.ಕೃಷಿಕರಿಗೆ ಶೂನ್ಯ ಬಡ್ಡಿ ಸಾಲದ ಮಿತಿಯನ್ನು 3 ರಿಂದ 5 ಲಕ್ಷಕ್ಕೆ ಏರಿಸಿರುವುದು ಮತ್ತು ಶೇ.3 ಬಡ್ಡಿ ದರದ ಸಾಲ ಮಿತಿಯನ್ನು10 ಲಕ್ಷದಿಂದ 15 ಲಕ್ಷಕ್ಕೆ ಏರಿಸಿರುವುದು ಕೃಷಿಕರಿಗೆ ಹೆಚ್ಚು ಅನುಕೂಲಕರವಾಗಿದೆ. ಕೃಷಿಕರಿಗೆ ವಾಹನ ಖರೀದಿಗೆ, ಗೋದಾಮು ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಿರುವುದು ಸಂತಸದ ವಿಚಾರ. ಒಟ್ಟಿನಲ್ಲಿ ಸರ್ವರನ್ನು ಮುಟ್ಟುವ ಬಜೆಟ್ ಇದಾಗಿದೆ. ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವು ಹಿಂದಿನ ಯೋಜನೆಗಳಿಗೆ ಪುನಶ್ಚೇತನ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಳಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಮುಖಂಡರಾದ ಸುರೇಶ್ ಎಂ.ಎಚ್, ಚಂದ್ರಲಿಂಗಂ, ನಂದರಾಜ ಸಂಕೇಶ್, ಜ್ಞಾನಶೀಲನ್ ರಾಜು ಉಪಸ್ಥಿತರಿದ್ದರು.