ಸುಳ್ಯ:ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಪಾಲ ದಾಟುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ನೀರು ಪಾಲಾದ ವ್ಯಕ್ತಿಗಾಗಿ ಶನಿವಾರವೂ ದಿನ ಪೂರ್ತಿ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಕಾಸರಗೋಡು ಜಿಲ್ಲೆಯ ಈಸ್ಟ್ ಎಳೇರಿ ಪಂಚಾಯತ್ನ ಚಿಟ್ಟಾರಿಕಾಲ್ ಸಮೀಪದ ಕಡುಮೇನಿಯ ನಾರಾಯಣನ್ (47) ಎಂಬವರು ನಾಪತ್ತೆಯಾದವರು. ಅಗ್ನಿಶಾಮಕ
ದಳ, ಪೊಲೀಸ್, ಎಸ್ಡಿಆರ್ಎಫ್ ತಂಡ ಹಾಗೂ ಸ್ಥಳೀಯ ಈಜುಗಾರರು ನಿರಂತರ ಶೋಧ ನಡೆಸಿದರೂ ಪತ್ತೆಯಾಗಲಿಲ್ಲ. ತಂಡ ವಿಪರೀತ ಮಳೆಯ ನಡುವೆಯೂ ಶನಿವಾರವೂ ದಿನಪೂರ್ತಿ ಹುಡುಕಾಟ ನಡೆಸಿದ್ದಾರೆ. ಸುಳ್ಯ ಎಸ್.ಐ ಈರಯ್ಯ ದೂಂತೂರು ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಗುರುವಾರ ಸಂಜೆ ಘಟನೆ ಸಂಭವಿಸಿತ್ತು.
ನಾರಾಯಣನ್ ಕೆಲವು ದಿನಗಳ ಹಿಂದೆ ಕೂರ್ನಡ್ಕ ಸಮೀಪ ತೋಟದ ಕೆಲಸಕ್ಕೆ ಬಂದಿದ್ದರು. ಗುರುವಾರ ಸಂಜೆ ಪಾಲ ದಾಟುತ್ತಿದ್ದ ಸಂದರ್ಭ ನಾರಾಯಣನ್ ಅವರು ಆಯತಪ್ಪಿ ನೀರಿಗೆ ಬಿದ್ದು ನೀರುಪಾಲಾಗಿದ್ದಾರೆ.