ಬೆಂಗಳೂರು: ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಅರಿತು ಕಾರ್ಯ ನಿರ್ವಹಿಸಬೇಕು.ಕಚೇರಿಗಳಲ್ಲಿ ಕುಳಿತು ನಿರ್ಣಯ ಕೈಗೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.
ಮುಂಗಾರು ಸಿದ್ಧತೆ ಹಾಗೂ ವಿಪತ್ತು ನಿರ್ವಹಣಾ ಸಿದ್ಧತೆ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳ ಜತೆ
ವಿಡಿಯೊ ಕಾನ್ಫರೆನ್ಸ್ ನಡೆಸಿದ ಅವರು, ಸ್ಥಳಕ್ಕೆ ತೆರಳಿ ವಾಸ್ತವಿಕ ಸ್ಥಿತಿ ಅರಿತು ನಿರ್ಣಯ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಹೊಸ ಸರ್ಕಾರದ ಮೇಲೆ ಜನರ ನಿರೀಕ್ಷೆ ದೊಡ್ಡದಿದೆ. ಆ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಸ್ಪಂದಿಸಿ, ಕೆಲಸ ಮಾಡಬೇಕು. ಅಧಿಕಾರಿಗಳು ಕೂಡ ಚುರುಕಾಗಬೇಕು. ತಾವು ಬಯಸಿದ ರೀತಿಯ ಬದಲಾವಣೆ ಆಡಳಿತದಲ್ಲಿ ಆಗಿದೆ ಎಂಬುದು ಸಾಮಾನ್ಯ ಜನರಿಗೆ ಅರಿವಿಗೆ ಬರಬೇಕು. ಅದಕ್ಕಾಗಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ್ನ ಸೂಚನೆ ನೀಡಿದ್ದೇನೆ’ ಎಂದರು.
ಕೆಲವು ಕಡೆ ಮುಂಗಾರು ಪೂರ್ವ ಮಳೆ ಬಿದ್ದಿದೆ. ಏಪ್ರಿಲ್, ಮೇ, ಜೂನ್ವರೆಗೆ ಮುಂಗಾರು ಪೂರ್ವ ಮಳೆ ಬರುತ್ತದೆ. ಈ ಬಾರಿ ವಾಡಿಕೆಗಿತ ಶೇಕಡ 10ರಷ್ಟು ಹೆಚ್ಚು ಮಳೆ ಬಿದ್ದಿದೆ. ಜೂನ್ 9ರಿಂದ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಮುಂಗಾರು ಪೂರ್ವದಲ್ಲಿ 2.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಬೇಕಿತ್ತು. ಈವರೆಗೆ 2 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು. ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕಗಳಿಲ್ಲ ಎಂಬ ದೂರು ರೈತರಿಂದ ಬರಬಾರದು. ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಯಾವುದೇ ಕಾರಣಕ್ಕೂ ಪರಿಹಾರ ವಿಳಂಬ ಆಗಬಾರದು ಎಂದು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.ಪ್ರವಾಹ ಹಾನಿ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಶಿಥಿಲವಾಗಿರುವ ಸೇತುವೆ, ಕೆರೆಕಟ್ಟೆ, ಶಾಲಾ ಕಟ್ಟಡಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.