ಸುಳ್ಯ:ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸುಳ್ಯ ತಾಲೂಕು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ವತಿಯಿಂದ ಸುಳ್ಯ ಕಾರ್ಮಿಕ ಇಲಾಖೆ ಕಛೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್ ಜಿಲ್ಲಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ೨೦೨೨-೨೩ನೇ ಸಾಲಿನಲ್ಲಿ ಕಾರ್ಮಿಕರ
ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಇನ್ನೂ ಬಿಡುಗಡೆ ಮಾಡಿಲ್ಲ ಕೂಡಲೇ ೨೦೨೨-೨೩ನೇ ಸಾಲಿನ ಶೈಕ್ಷಣಿಕ ಸಹಾಯಧವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ ೨೦೨೧-೨೨ನೇ ಸಾಲಿನಲ್ಲಿ ೧.೫ ಲಕ್ಷ ಫಲಾನುಭವಿಗಳಿಗೆ ಬಾಕಿ ಉಳಿಸಿಕೊಂಡಿರುವ ಶೈಕ್ಷಣಿಕ ಸಹಾಯಧನವನ್ನು ಪಾವತಿಸುವಂತೆ ಮತ್ತು ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಬೇಕು ಎಂದು ಅವರು ಒತ್ತಾಯಿಸಿದರು.
ಸಿಐಟಿಯು ತಾಲೂಕು ಅಧ್ಯಕ್ಷ ವಿಶ್ವನಾಥ ನೆಲ್ಲಿಬಂಗಾರಡ್ಕ, ಪ್ರಧಾನ ಕಾರ್ಯದರ್ಶಿ ಕೆ.ಪಿ.ರಾಬರ್ಟ್ ಡಿಸೋಜಾ, ವಸಂತ ಗೌಡ ಪೆಲ್ತಡ್ಕ, ರಾಜ್ಯ ಸಮಿತಿ ಸದಸ್ಯ ಬಿಜು ಅಗಸ್ಟಿನ್, ಪ್ರಮುಖರಾದ ಆನಂದ ಗೌಡ, ಶಿವರಾಮ ಗೌಡ, ಗಣೇಶ ಕೊಡಿಯಾಲಬೈಲ್, ಶ್ರೀಧರ ಕಡೆಪಾಲ, ಪ್ರಮೀಳಾ ಪೆಲ್ತಡ್ಕ, ವಿಜಯ ಮಾಲತೇಶ್, ವೆಂಕಟೇಶ್ ನಾನಿ ಸೇರಿದಂತೆ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.