ಬೆಂಗಳೂರು: ಇಸ್ರೋದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಕ್ಷಣಗಣನೆ ಆರಂಭವಾಗಿದೆ. ಈ ಕೌತುಕದ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕೆ ಇಡೀ ಜಗತ್ತು ಭಾರತದತ್ತ ಕಾತರದಿಂದ ಕಾದಿದೆ. ಬುಧವಾರ ಸಂಜೆ ಸುಮಾರ 6 ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ
ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.ಚಂದ್ರಯಾನ-3ರ ಯಶಸ್ಸಿಗಾಗಿ ಭಾರತ ಸೇರಿದಂತೆ ದೇಶ ವಿದೇಶಗಳಲ್ಲಿ ಹೋಮ, ಹವನ ಮಾಡಲಾಗುತ್ತಿದೆ. ದೇಶದ ಹಲವು ಭಾಗಗಳಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ.ಬುಧವಾರ ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಮಯ ನಿಗದಿ ಮಾಡಲಾಗಿದೆ. ಚಂದ್ರನ ಮೇಲೆ ಸೂರ್ಯನ ಕಿರಣಗಳು ಬಿದ್ದ ಬಳಿಕವಷ್ಟೇ ಲ್ಯಾಂಡಿಂಗ್ ಸಾಧ್ಯವಾಗಲಿದೆ.
ಭೂಮಿಯಿಂದ 3.84 ಲಕ್ಷ ಕಿಲೋ ಮೀಟರ್ ದೂರ ಇರುವ ಚಂದ್ರನ ಸಮೀಪಕ್ಕೆ ತೆರಳಲು ವಿಕ್ರಮ್ ಲ್ಯಾಂಡರ್ 45 ದಿನಗಳ ಪ್ರಯಾಣ ಮಾಡಿದೆ. ಸದ್ಯ ವಿಕ್ರಮ್ ಲ್ಯಾಂಡರ್ ಚಂದ್ರನಿಂದ 25 ಕಿ.ಮೀ ಎತ್ತರದಲ್ಲಿ ನಿಂತಿದೆ.