ಸುಳ್ಯ: ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗುವುದು ಮತ್ತು ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಚೌಟ ಎಂಪಿ ಆಗುವುದು ಖಚಿತ. ದಕ್ಷಿಣ ಕನ್ನಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಸುಳ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ನಾನು ಅಧಿಕಾರದ ಆಸೆಗಾಗಿ ಎಂದೂ
ರಾಜಕೀಯ ಮಾಡಿಲ್ಲ. ವಿಚಾರಧಾರೆಯ ಬದ್ಧತೆಯ ಮೇರೆಗೆ ರಾಜಕಾರಣ ಮಾಡುತ್ತೇನೆ ಆದುದರಿಂದ ಅಧಿಕಾರ ಬಿಟ್ಟು ಕೊಡಲು ಯಾವುದೇ ಹಿಂಜರಿಕೆ ಇಲ್ಲಾ ಎಂದು ಹೇಳಿದರು.
ಸುಳ್ಯದಲ್ಲಿ ಅತೀ ಹೆಚ್ಚಿನ ಅಭಿವೃದ್ಧಿ:ಎಸ್.ಅಂಗಾರ
ದಕ್ಷಿಣ ಕನ್ಬಡ ಜಿಲ್ಲೆಯ ಇತರ ಯಾವುದೇ ಕ್ಷೇತ್ರಗಳಲ್ಲಿ ಆಗಿರುವುದಕ್ಕಿಂತ ಹೆಚ್ಚಿನ ಅಭಿವೃದ್ಧಿ ಸುಳ್ಯ ಕ್ಷೇತ್ರದಲ್ಲಿ ಆಗಿದೆ. ಇದನ್ನು ಅಂಕಿ ಅಂಶಗಳ ಸಮೇತ ಸಾಬೀತು ಮಾಡಲು ಸಿದ್ಣ ಎಂದು ಮಾಜಿ ಸಚಿವ ಎಸ್.ಅಂಗಾರ
ಹೇಳಿದರು.1994ಕ್ಕಿಂತ ಮೊದಲು ಸುಳ್ಯ ಕ್ಷೇತ್ರ ಯಾವ ರೀತಿ ಇತ್ತು, ಆ ಬಳಿಕ ಎಷ್ಟು ಅಭಿವೃದ್ಧಿ ಆಗಿದೆ ಎಂಬುದು ಎಲ್ಲರ ಮುಂದಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಅತೀ ಹೆಚ್ಚಿನ ಅನುದಾನ ಬಂದಿದೆ.ಎಲ್ಲಾ ಸರಕಾರಗಳೂ ತನಗೆ ಅನುದಾನ ನೀಡಿದೆ ಎಂದ ಅವರು ತನ್ನ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಂಕಿ ಅಂಶಗಳ ಸಮೇತ ಸಾಬೀತು ಮಾಡಲು ಸಿದ್ಧ ಎಂದು ಅವರು ಹೇಳಿದರು.ಸುಳ್ಯದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಹೇಳುವವರಿಗೆ ಈ ಅಂಕಿ ಅಂಶಗಳು ಉತ್ತರ ನೀಡಲಿದೆ ಎಂದರು.
ಸುಳ್ಯ ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆದ
ಸಮಾವೇಶವನ್ನು ಉದ್ಘಾಟಿಸಿದ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಶಾಸಕ
ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಸುಳ್ಯ ಮಂಡಲ ಉಸ್ತುವಾರಿಗಳಾದ ಅಪ್ಪಯ್ಯ ಮಣಿಯಾಣಿ, ಸೀತಾರಾಮ ಬೆಳಾಲು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ಕಿಶೋರ್ ಕುಮಾರ್ ಬೊಟ್ಯಾಡಿ, ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು, ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ದೇವದಾಸ ಶೆಟ್ಟಿ,ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾದ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಸ್ವಾಗತಿಸಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ವಂದಿಸಿದರು.
ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ.ಕಾರ್ಯಕ್ರಮ ನಿರೂಪಿಸಿದರು.