ಸುಳ್ಯ: ಕ್ಷೇತ್ರಕ್ಕೆ ಅಗತ್ಯವಾದ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುವುದು, ಜನರಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯವನ್ನು ಒದಗಿಸುವುದು, ಸರಕಾರದ ಎಲ್ಲಾ ಸೌಲಭ್ಯಗಳನ್ನೂ ಬಡವರಿಗೆ, ಜನ ಸಾಮಾನ್ಯರಿಗೆ, ದಲಿತ ಕಾಲನಿಗಳಿಗೆ ತಲುಪಿಸುವುದು ಶಾಸಕಿಯಾಗಿ ನನ್ನ ಮೊದಲ ಆದ್ಯತೆ. ಸರಕಾರ ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳುತ್ತೇನೆ. ರಾಜಕೀಯ ಚುನಾವಣೆಗೆ ಮಾತ್ರ ಸೀಮಿತ. ಇನ್ನು ಜನಕ್ಷೇಮ
ಮಾತ್ರ ಗುರಿ. ಹೀಗೆಂದವರು ಸುಳ್ಯದ ನೂತನ ಶಾಸಕಿ ಭಾಗೀರಥಿ ಮುರುಳ್ಯ. ‘ಸುಳ್ಯ ಮಿರರ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದರು.
ಪ್ರಶ್ನೆ: ಸುಳ್ಯ ಕ್ಷೇತ್ರಕ್ಕಾಗಿ ಮುಂದಿನ ಐದು ವರ್ಷದಲ್ಲಿ ಏನು ಮಾಡುತ್ತೀರಿ..?
ಉತ್ತರ: ಮೂಲಭೂತ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ.ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಜನರಿಗೆ ಅತೀ ಅಗತ್ಯವಾಗಿರುವ ಕೆಲಸಗಳಿಗೆ ಒತ್ತು ನೀಡುತ್ತೇನೆ. ಸರಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಎಲ್ಲಾ ಪ್ರಯತ್ನವನ್ನೂ ಮಾಡುವುದರ ಜೊತೆಗೆ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇನೆ.
ಪ್ರಶ್ನೆ: ಸುಳ್ಯದಲ್ಲಿ ಬಿಜೆಪಿ ಗೆದ್ದಿದೆ,ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದರಿಂದ ಕ್ಷೇತ್ರಕ್ಕೆ ಅನುದಾನ ಬರುವುದರಲ್ಲಿ ಕೊರತೆ ಆಗಬಹುದಾ.?
ಉತ್ತರ:ಇಲ್ಲಾ ಹಾಗೇನಿಲ್ಲ. ಬಿಜೆಪಿ,ಕಾಂಗ್ರೆಸ್ ಪಕ್ಷಗಳು ಎಂಬ ಭಿನ್ನತೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ. ಇನ್ನು ಕ್ಷೇತ್ರದ ಶಾಸಕಿ, ಜನರ ಸರಕಾರ. ಸುಳ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರದಿಂದ ಅನುದಾನ ಕೇಳುತ್ತೇನೆ. ಎಲ್ಲಾ ಇಲಾಖೆಗಳಿಂದಲೂ ಅನುದಾನ ತರುವ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೊಂದಿಗೂ ಅನ್ಯೂನ್ಯತೆಯಿಂದ ಕಾರ್ಯ ನಿರ್ವಹಿಸುತ್ತೇನೆ.
ಪ್ರಶ್ನೆ:ವಿದ್ಯುತ್ ಸುಳ್ಯದ ದೊಡ್ಡ ಸಮಸ್ಯೆ,110 ಕೆವಿ ಸಬ್ ಸ್ಟೇಷನ್ ಬಹು ಕಾಲದ ಬೇಡಿಕೆ. ಇದರ ಅನುಷ್ಠಾನಕ್ಕೆ ನಿಮ್ಮ ಪ್ರಯತ್ನ ಏನು..?
ಉತ್ತರ: ಸಚಿವ ಅಂಗಾರ ನೇತೃತ್ವದಲ್ಲಿ 110 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಪೂರಕವಾಗಿ ಟೆಂಡರ್ ಪ್ರಕ್ರಿಯೆ ಪೂರ್ತಿ ಮಾಡಿದ್ದಾರೆ. ಅದನ್ನು ಆದಷ್ಟು ಬೇಗ ಅನುಷ್ಠಾನ ಮಾಡಲು ಪ್ರಯತ್ನಿಸುತ್ತೇನೆ. ರೈತರಿಗೆ, ಜನ ಸಾಮಾನ್ಯರಿಗೆ ಸೇರಿ ಎಲ್ಲರಿಗೂ ವಿದ್ಯುತ್ ಅತೀ ಅಗತ್ಯ ಎಂದು ಮನಗಂಡಿದ್ದೇನೆ. ಸುಳ್ಯದ ಅಭಿವೃದ್ಧಿಗೆ 110 ಕೆ.ವಿ.ಸಬ್ ಸ್ಟೇಷನ್ ಅತೀ ಅಗತ್ಯವೂ ಹೌದು.
ಪ್ರಶ್ನೆ:ಜನ ಸಾಮಾನ್ಯರು, ಬಡವರು ನಿಮ್ಮ ಮೇಲೆ ನಿರೀಕ್ಷೆಯಿಟ್ಟಿದ್ದಾರೆ. ನಿಮ್ಮ ಅನಿಸಿಕೆ ಏನು.?
ಉತ್ತರ:ಸಾಮಾನ್ಯ ಮತ್ತು ಬಡ ಕುಟುಂಬದಿಂದ ಬಂದ ಜನ ಸಾಮಾನ್ಯರ ಪ್ರತಿನಿಧಿ ನಾನು. ಜನರ ನಿರೀಕ್ಷೆ ಹುಸಿಯಾಗದಂತೆ ಹಿರಿಯರ, ಮುಖಂಡರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಜನರ ಜೊತೆ ಸದಾ ಇರುತ್ತೇನೆ.
ಪ್ರಶ್ನೆ: ಚುನಾವಣಾ ಸಂದರ್ಭದಲ್ಲಿ ಹಲವು ಕಡೆ ಅಭಿವೃದ್ಧಿ ಬೇಡಿಕೆ, ಚುನಾವಣಾ ಬಹಿಷ್ಕಾರದ ಬ್ಯಾನರ್ ಇತ್ತು. ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ಉತ್ತರ: ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದೆ. ಅದನ್ನು ಮುಂದುವರಿಸುವ ಕೆಲಸ ಮಾಡುತ್ತೇನೆ. ಮೂಲಭೂತ ಸೌಕರ್ಯಕ್ಕಾಗಿನ ಬೇಡಿಕೆಗಳು ನಿರಂತರ ಇರುತ್ತದೆ. ಅದು ಸಹಜ. ಆದುದರಿಂದ ಗ್ರಾಮೀಣ ಭಾಗದಲ್ಲಿ, ಕಾಲನಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡುತ್ತೇನೆ.
ಪ್ರಶ್ನೆ: ಇಷ್ಟು ದೊಡ್ಡ ಅಂತರದ ಗೆಲುವು ನಿರೀಕ್ಷಿಸಿದ್ದೀರಾ..?
ಉತ್ತರ:ಇಷ್ಟು ದೊಡ್ಡ ಅಂತರದ ಗೆಲುವು ನಾನು ನಿರೀಕ್ಷೆ ಮಾಡಿರಲಿಲ್ಲ. ಆದರೆ ನಾಯಕರಿಗೆ, ಕಾರ್ಯಕರ್ತರಿಗೆ ನಿರೀಕ್ಷೆ ಇತ್ತು. ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗದೇ ಪ್ರಾಮಾಣಿಕವಾಗಿ ಮತದಾನ ಮಾಡಿ ಸಾಮಾನ್ಯ ಕಾರ್ಯಕರ್ತೆಯನ್ನು ಬೆಂಬಲಿಸಿದ್ದಾರೆ. ಬಿಜೆಪಿ ಸಂಘ ಪರಿವಾರದ ನಾಯಕರ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಕರ್ತರ ಪ್ರಾಮಾಣಿಕ ಪ್ರಯತ್ನದಿಂದ ಈ ಗೆಲುವು ಸಾಧ್ಯವಾಗಿದೆ. ಈ ಗೆಲವುವನ್ನು ಕಾರ್ಯಕರ್ತರಿಗೆ ಸಮರ್ಪಿಸುತ್ತೇನೆ. ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.