ಸುಳ್ಯ: ಇದು ಒಲವಿನ ಬಣ್ಣ.. ಬದುಕಿಗೆ ಸಂಭ್ರಮ ತುಂಬುವ ಬಣ್ಣ.. ಕನಸಿಗೆ ಗೆಜ್ಜೆ ಕಟ್ಟುವ, ಬಾಲ್ಯಕ್ಕೆ ನವೋಲ್ಲಾಸ ತುಂಬುವ ಬಣ್ಣ. ಹೌದು ಮಕ್ಕಳ ಬಾಳಿಗೆ ಬಣ್ಣದ ದಿನಗಳನ್ನು ನೀಡಲು, ಬೇಸಿಗೆ ರಜೆಯಲ್ಲಿ ಸಂಭ್ರಮದ ಅಲೆ ಎಬ್ಬಿಸಲು ಸುಳ್ಯದ ರಂಗ ಮಯೂರಿ ಕಲಾ ಶಾಲೆಯ ಬೇಸಿಗೆ ಶಿಬಿರಕ್ಕೆ ಸಿದ್ಧತೆಗಳು ಆರಂಭಗೊಂಡಿದೆ.
ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮಯೂರಿ ಕಲಾಶಾಲೆ ಪ್ರಸ್ತುತಪಡಿಸುವ ರಾಜ್ಯ ಮಟ್ಟದ ಮಕ್ಕಳ ಬೇಸಿಗೆ ಶಿಬಿರ ‘ಬಣ್ಣ’ ಈ ಬಾರಿ ಸುಳ್ಯದ
ಕಾಯರ್ತೋಡಿ ದೇವಸ್ಥಾನದಲ್ಲಿ ಹಾಗೂ ಮಡಿಕೇರಿಯ ಜ್ಯೂನಿಯರ್ ಕಾಲೇಜಿನಲ್ಲಿ ಪ್ರತ್ಯೇಕವಾಗಿ ನಡೆಯಲಿದೆ. ಸುಳ್ಯದ ಕಾಯರ್ತೋಡಿ ದೇವಸ್ಥಾನದಲ್ಲಿ ಏಪ್ರಿಲ್ 11 ರಿಂದ 18 ರವರೆಗೆ, ಮಡಿಕೇರಿ ಜ್ಯೂನಿಯರ್ ಕಾಲೇಜಿನಲ್ಲಿ ಏಪ್ರಿಲ್ 22 ರಿಂದ 30 ರವರೆಗೆ ಶಿಬಿರ ನಡೆಯಲಿದೆ. ಶಿಬಿರಕ್ಕಾಗಿ ದಾಖಲಾತಿ ಆರಂಭಗೊಂಡಿದೆ.ಮಕ್ಕಳ ಕನಸಿನ ಶಿಬಿರ ಬಣ್ಣಕ್ಕಾಗಿ

ಈಗಾಗಲೇ ವೇದಿಕೆ ಅಣಿಯಾಗುತಿದೆ. ಮಕ್ಕಳ ಕನಸುಗಳಿಗೆ, ಬಾಲ್ಯದ ದಿನಗಳಿಗೆ ಬಣ್ಣ ಹಚ್ಚಲು, ಬದುಕಿನ ಹಾದಿಗೆ ನೈಜ ರೂಪ ನೀಡಲು ಹೊಚ್ಚ ಹೊಸ, ಕ್ರಿಯಾಶೀಲತೆಯ ಅಶಯಗಳೊಂದಿಗೆ ಬಣ್ಣ ನಿಮ್ಮ ಮುಂದೆ ಬರಲಿ ಸೆ. ಬಣ್ಣ, ಬಣ್ಣದ ನವ ನವೀನ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ರಜಾದಿನದ ಸಂಭ್ರಮವನ್ನು ಹೆಚ್ಚಿಸಲು ಮಕ್ಕಳನ್ನು ಕೈ ಬೀಸಿ ಕರೆಯುತಿದೆ. ರಜಾ ದಿನದ ಮಜಾಕ್ಕಾಗಿ ಕಾಯೋ ಮಕ್ಕಳ ಕನಸಿನ ಕಣ್ಣುಗಳಿಗೆ ಹೊಸ ಚಿತ್ತಾರವನ್ನು ಮೂಡಿಸುತ್ತಾ, ಹಾರಬೇಕೆನಿಸುವ ಪುಟ್ಟ ಹಕ್ಕಿಗೆ ಹೊಸತೊಂದು ರೆಕ್ಕೆಯನ್ನು ಕಟ್ಟುತ್ತಾ ಮೂರನೇ ವರ್ಷಕ್ಕೆ ಕಾಲಿಡೋದಿಕ್ಕೆ ಸಜ್ಜಾಗಿದೆ “ಬಣ್ಣ – 2023”. ಮೂರನೇ ವರ್ಷದ ‘ಬಣ್ಣ-2023’ರಲ್ಲಿ ವಿಭಿನ್ನ ಶೈಲಿಯ ತರಬೇತಿ, ಮಕ್ಕಳ ಕನಸಿನ ಬಣ್ಣಕ್ಕೆ ಮತ್ತಷ್ಟು ಮೆರುಗು ತರಲಿದೆ.

ಈ ಬೇಸಿಗೆ ಶಿಬಿರ ಹಲವು ವೈವಿಧ್ಯಮಯ ವಿಷಯಗಳನ್ನು ಆಯ್ದ ನುರಿತ, ಹೆಸರಾಂತ, ಅನುಭವೀ ಸಂಪನ್ಮೂಲ ವ್ಯಕ್ತಿಗಳಿಂದ, ತರಬೇತುದಾರರಿಂದ ಮಕ್ಕಳಿಗೆ ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎಂದು ಶಿಬಿರದ ಆಯೋಜಕರಾದ, ಸುಳ್ಯ ರಂಗಮಯೂರಿ ಕಲಾಶಾಲೆಯ ನಿರ್ದೇಶಕರಾದ ಲೋಕೇಶ್ ಊರುಬೈಲ್ ತಿಳಿಸಿದ್ದಾರೆ.ಅಲ್ಲದೇ, ಶಿಬಿರದಲ್ಲಿ ಈ ಹಿಂದಿನ ವರ್ಷಕ್ಕಿಂತ ವಿಭಿನ್ನವಾಗಿರೋ, ವಿಷಯಾಧಾರಿತ ಆಕರ್ಷಕ ತರಬೇತಿಗಳನ್ನು, ಆಟಗಳನ್ನು, ಆಶಯಗಳನ್ಬು ಮಕ್ಕಳಿಗಾಗಿ ತಯಾರಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

8 ದಿನಗಳ ಕಾಲ ನಡೆಯುವ ಮಕ್ಕಳ ಈ ಬೇಸಿಗೆ ಶಿಬಿರದಲ್ಲಿ ಭಾಗವಹಿಸುವವರ ವಯೋಮಿತಿ 7 ರಿಂದ 17 ವರ್ಷದೊಳಗಿರಬೇಕೆಂಬ ನಿಯಮವನ್ನು ಈಗಾಗಲೇ ತಿಳಿಸಲಾಗಿದ್ದು, ಶಿಬಿರದ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಆಸಕ್ತ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಈ ಕೆಳಗಿನ ವಿವರದಲ್ಲಿ ತಿಳಿಸಲಾಗಿದೆ.
ರಂಗಮಯೂರಿ ಕಲಾಶಾಲೆ (ರಿ.) ಸುಳ್ಯ, ಮೂರನೇ ಮಹಡಿ, ಶ್ರೀಹರಿ ಕಾಂಪ್ಲೆಕ್ಸ್, ಮುಖ್ಯರಸ್ತೆ ಸುಳ್ಯ
ಸಂಪರ್ಕಿಸಬೇಕಾದ ಮೊ. ಸಂಖ್ಯೆ ; 9611355496, 6363783983.