ಚೆನ್ನೈ:ಟೀಂ ಇಂಡಿಯಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಗಾಗಿ ಬಾಂಗ್ಲಾದೇಶ ತಂಡ ಚೆನ್ನೈಗೆ ಬಂದಿಳಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಸೆಪ್ಟೆಂಬರ್ 19 ರಿಂದ ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ಆರಂಭವಾಗಲಿದೆ. ಹೀಗಾಗಿ ನಜ್ಮುಲ್ ಹಸನ್ ಶಾಂಟೊ ನಾಯಕತ್ವದ
15 ಸದಸ್ಯರ ಬಾಂಗ್ಲಾದೇಶ ಪಡೆ ಭಾರತಕ್ಕೆ ಕಾಲಿಟ್ಟಿದೆ. ಇಂದು ಮುಂಜಾನೆ ಡಾಕಾದಿಂದ ವಿಮಾನವೇರಿದ್ದ ಬಾಂಗ್ಲಾದೇಶ ತಂಡ ಇದೀಗ ಚೆನ್ನೈಗೆ ಬಂದಿಳಿದೆ. ಮೊದಲ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಈಗಾಗಲೇ ತನ್ನ ತಯಾರಿಯನ್ನು ಆರಂಭಿಸಿದ್ದು, ಈಗ ಚೆನ್ನೈಗೆ ಬಂದಿಳಿದಿರುವ ಬಾಂಗ್ಲಾದೇಶ ತಂಡ ನಾಳೆಯಿಂದ ತನ್ನ ಅಭ್ಯಾಸ ಆರಂಭಿಸಲಿದೆ.ಬಾಂಗ್ಲಾದೇಶ ತಂಡ ಇತ್ತೀಚೆಗಷ್ಟೇ ಪಾಕಿಸ್ತಾನವನ್ನು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮಣಿಸಿತ್ತು. ಬಲಿಷ್ಠ ಪಾಕಿಸ್ತಾನ ವಿರುದ್ಧ ಸಾಂಘೀಕ ಹೋರಾಟ ನೀಡಿದ್ದ ಬಾಂಗ್ಲಾದೇಶ ತಂಡ ಮೊಟ್ಟ ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು.
ಭಾರತ ಮತ್ತು ಬಾಂಗ್ಲಾದೇಶ ನಡುವೆ ಇದುವರೆಗೆ ಒಟ್ಟು 13 ಟೆಸ್ಟ್ ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 11 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 2 ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ. ಅಂದರೆ ಬಾಂಗ್ಲಾದೇಶ ತಂಡಕ್ಕೆ ಇಲ್ಲಿಯವರೆಗೆ ಭಾರತದ ವಿರುದ್ಧ ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಟೆಸ್ಟ್ ಸರಣಿಗೆ ಬಾಂಗ್ಲಾದೇಶ ತಂಡ:
ನಜ್ಮುಲ್ ಹುಸೇನ್ ಶಾಂಟೊ (ನಾಯಕ), ಜಾಕಿರ್ ಹಸನ್, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಾದ್ಮನ್ ಇಸ್ಲಾಂ, ಶಕೀಬ್ ಅಲ್ ಹಸನ್, ಮೆಹದಿ ಹಸನ್ ಮಿರಾಜ್, ಝಾಕರ್ ಅಲಿ ಅನಿಕ್, ತಸ್ಕಿನ್ ಅಹ್ಮದ್, ಲಿಟನ್ ದಾಸ್, ಹಸನ್ ಮಹಮೂದ್, ತೈಜುಲ್ ಇಸ್ಲಾಂ, ಮಹ್ಮುದುಲ್ ಹಸನ್ ಜಾಯ್, ನಹಿದ್ ರಾಣಾ, ಖಾಲಿದ್ ಅಹ್ಮದ್.