ಸುಳ್ಯ: ಕ್ಷೇತ್ರದ ತಾಲೂಕು ಆಸ್ಪತ್ರೆಗಳಲ್ಲಿಯೇ ಎಲ್ಲಾ ಚಿಕಿತ್ಸೆಗಳು ಲಭಿಸುವಂತೆ ಆಧುನಿಕಗೊಳಿಸುವುದು. ಪ್ರತಿ ಗ್ರಾಮಗಳಿಗೂ ಸರಕಾರಿ ಬಸ್ಸೇವೆ, ಬಡವರ ವಾಸ ಸ್ಥಳಕ್ಕೆ ಹಕ್ಕುಪತ್ರ, ವಸತಿ, ಸಮಗ್ರ ಕುಡಿಯುವ ನೀರಿನ ವ್ಯವಸ್ಥೆ.. ಹೀಗೆ ಕ್ಷೇತ್ರದಲ್ಲಿ ಜನರಿಗೆ ಅತೀ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಜೂ.24 ರಂದು ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.ಸುಳ್ಯ ಹಾಗೂ ಕಡಬ ತಾಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕ, ಇತರ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಆರೋಗ್ಯ ಸಚಿವರ ಗಮನಕ್ಕೆ ತರಲಾಗಿದೆ. ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಎಕ್ಸರೇ ಟೆಕ್ನಿಷಿಯನ್, ಬೆಳ್ಳಾರೆ ಆರೋಗ್ಯ ಕೇಂದ್ರದಲ್ಲಿ 24 ಗಂಟೆ ವೈದ್ಯರ ನೇಮಕದ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು. ಬಡವರ ವಾಸ ಸ್ಥಳಕ್ಕೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು. ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ ಮಾಡಿ ಪ್ರತಿ ಕಾಲನಿಗಳು ಸೇರಿದಂತೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಲಭ್ಯತೆಗೆ ಕ್ರಮ ಕೈಗೊಳ್ಳಲಾಗುವುದು.
ಸುಳ್ಯ, ಕಡಬದಲ್ಲಿ ಕೈಗಾರಿಕಾ ವಲಯ ಬೇಕು ಎಂಬ ಬೇಡಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರ ಹಾಗೂ ತಜ್ಞರ ಅಭಿಪ್ರಾಯ ಕ್ರೂಢೀಕರಿಸಲಾಗುವುದು. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಾಗಿದೆ. 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು. ಭಾಗಷಃ ಅರಣ್ಯದಿಂದ ಹಕ್ಕು ಪತ್ರ ಸಿಗದೆ ಸರಕಾರಿ ಸೌಲಭ್ಯದಿಂದ ವಂಚಿತರಾಗಿರುವ ಬಗ್ಗೆ, ನೆಟ್ ವರ್ಕ್ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ಬಗ್ಗೆ ಏನು ಮಾಡಬೇಕೋ ಅದನ್ನು ಮಾಡಲಾಗುವುದು. ಬೈಪಾಸ್ ರಸ್ತೆ ನಿರ್ಮಾಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಈ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಹೇಳಿದರು.
ಕಳೆದ ಬಾರಿ ಪ್ರಾಕೃತಿಕ ವಿಕೋಪ ಉಂಟಾಗಿರುವ ಗ್ರಾಮಗಳಲ್ಲಿ ಕೊಚ್ಚಿ ಹೋದ ರಸ್ತೆ, ಸೇತುವೆಗಳ ಬದಲಿಗೆ ಹಲವೆಡೆ ತಾತ್ಕಾಲಿಕ ವ್ಯವಸ್ಥೆ ಮಾತ್ರ ಮಾಡಲಾಗಿದೆ. ಶಾಶ್ವತ ನಿರ್ಮಾಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಈ ಭಾಗದಲ್ಲಿ ಅಗತ್ಯ ಮುಂಜಾಗೃತಾ ಕ್ರಮ ತೆಗೆದು ಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇಲ್ಲಿ ಶಾಶ್ವತ ನಿರ್ಮಾಣ ಮಳೆಗಾಲ ಮುಗಿದ ಬಳಿಕವಷ್ಟೇ ಸಾಧ್ಯ ಎಂದರು.
ಕಾಞಂಗಾಡ್- ಕಾಣಿಯೂರು ರೈಲ್ವೇ ಹಳಿ ನಿರ್ಮಾಣ ಯೋಜನೆ ಅನುಷ್ಠಾನ ಮಾಡಬೇಕೆಂಬ ಬೇಡಿಕೆಯ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಅವರು ಹೇಳಿದರು.
ಭವಿಷ್ಯದ ಅಭಿವೃದ್ಧಿಯ ದೃಷ್ಠಿಯಿಂದ
ಸುಳ್ಯಕ್ಕೆ ಸುಸಜ್ಜಿತ ಮತ್ತು ವಿಶಾಲವಾದ ಸರಕಾರಿ ಬಸ್ ನಿಲ್ದಾಣದ ನಿರ್ಮಾಣ, ಕೊಡಿಯಾಲಬೈಲ್ ದುಗ್ಗಲಡ್ಕ ಚತುಷ್ಪತೆ ರಸ್ತೆಯಾಗಿ ಅಭಿವೃದ್ಧಿ ಮಾಡಿ ರಿಂಗ್ ರೋಡ್ ನಿರ್ಮಾಣ, ಕೊಡಿಯಾಲಬೈಲ್ನಲ್ಲಿ ಸುಸಜ್ಜಿತ 400 ಮೀಟರ್ ಟ್ರಾಕ್ನ ತಾಲೂಕು ಕ್ರೀಡಾಂಗಣ, 220 ಕೆ.ವಿ.ಸಬ್ ಸ್ಟೇಷನ್ ನಿರ್ಮಾಣದ ಪ್ರಸ್ತಾವನೆ, ಸುಳ್ಯ, ಕಡಬ ತಾಲೂಕಿನಲ್ಲಿ ಕೈಗಾರಿಕಾ ವಲಯ ನಿರ್ಮಾಣ ಮತ್ತಿತರ ಅಭಿವೃದ್ಧಿ ಕುರಿತು ಪತ್ರಕರ್ತರು ನೀಡಿದ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಭಾಗೀರಥಿ ಮುರುಳ್ಯ ಹೇಳಿದರು. ಶಾಸಕಿ ಭಾಗೀರಥಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ ಸಂವಾದವನ್ನು ನಿರ್ವಹಿಸಿದರು. ನಿರ್ದೇಶಕರಾದ ದುರ್ಗಾಕುಮಾರ್ ನಾಯರ್ಕೆರೆ ಅಭಿನಂಧನಾ ಭಾಷಣ ಮಾಡಿದರು. ಕೋಶಾಧಿಕಾರಿ ರಮೇಶ್ ನೀರಬಿದಿರೆ ಸ್ವಾಗತಿಸಿ, ನಿರ್ದೇಶಕ ಗಂಗಾಧರ ಕಲ್ಲಪಳ್ಳಿ ವಂದಿಸಿದರು.