ಸುಳ್ಯ : ಒಂದು ಕಾಲದಲ್ಲಿ ಕೂಲಿ ಕಾರ್ಮಿಕೆಯಾಗಿ ದುಡಿದಿದ್ದ ಬದುಕಿನ ಬಂಡಿ ಮುನ್ನೆಡಸಲು ಹೈನುಗಾರಿಕೆ, ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ಸಾಮಾನ್ಯರಲ್ಲಿ ಜನ ಸಾಮಾನ್ಯೆ. ಬದುಕಿನಲ್ಲಿ ಎದುರಾದ ಕಷ್ಟಗಳನ್ನೇ ಮೆಟ್ಟಿಲಾಗಿಸಿ ಜನರ ಮಧ್ಯೆಯಿಂದ ಬೆಳೆದು ಬಂದ ನಿಷ್ಠಾವಂತ ಕಾರ್ಯಕರ್ತೆ.. ಪಕ್ಷದ ಶಿಸ್ತಿನ ಶಿಪಾಯಿ. ಇವರು ಭಾಗೀರಥಿ ಮುರುಳ್ಯ. ಜನ ಸಾಮಾನ್ಯರ ಪ್ರತಿನಿಧಿಯಾಗಿ ಇನ್ನು ವಿಧಾನಸಭೆಯಲ್ಲಿ ಭಾಗೀರಥಿ ಸುಳ್ಯದ ಧ್ವನಿಯಾಗಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ
ಮಹಿಳೆಯೊಬ್ಬರು ಶಾಸಕಿಯಾಗುವ ಮೂಲಕ ಭಾಗೀರಥಿ ಇತಿಹಾಸ ರಚಿಸಿದ್ದಾರೆ.ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಇದುವರೆಗೆ ಮೂರು ಮಂದಿ ಮಹಿಳೆಯರು ಮಾತ್ರ ಸ್ಪರ್ಧಿಸಿದ್ದಾರೆ. 2013ರಲ್ಲಿ ಒಬ್ಬರು. 2023ರಲ್ಲಿ ಇಬ್ಬರು. ಸುಳ್ಯ ಕ್ಷೇತ್ರದಿಂದ ಘೋಷಣೆಯಾದ ಮೂರನೇ ಮಹಿಳಾ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪ್ರಥಮ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದ ಭಾಗೀರಥಿ ಮುರುಳ್ಯ ಅವರದ್ದು ಸುಳ್ಯ ಬಿಜೆಪಿಯಲ್ಲಿ ಚಿರಪರಿಚಿತ ಹೆಸರು. ಕಳೆದ 25 ವರ್ಷಗಳಿಂದ ಪಕ್ಷದಲ್ಲಿ ಸಕ್ರೀಯರಾಗಿರುವ ಅವರು ಜನರ ಮಧ್ಯೆ ಇರುವ ಸಾಮಾಜಿಕ ಕಾರ್ಯಕರ್ತೆ.
ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಶಾಂತಿನಗರ ಮುರುಳ್ಯದ ದಿ.ಗುರುವ ಮತ್ತು ದಿ.ಕೊರಗ್ಗು ದಂಪತಿಯ 5 ಮಕ್ಕಳಲ್ಲಿ ನಾಲ್ಕನೆಯವರಾದ
ಭಾಗೀರಥಿ ಮುರುಳ್ಯ ಅವರು 1-6-1974ರಲ್ಲಿ ಜನಿಸಿದರು. ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದು, ಹೈನುಗಾರಿಕೆ, ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದರು ಗೌರವ ಶಿಕ್ಷಕಿಯಾಗಿಯೂ ಕೆಲ ಕಾಲ ದುಡಿದಿದ್ದಾರೆ. 25 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರೀಯರಾಗಿರುವ ಭಾಗೀರಥಿ
2000ದಿಂದ 2005ರವರಗೆ ಎಣ್ಮೂರು ಕ್ಷೇತ್ರದ ಸುಳ್ಯ ತಾಲೂಕು ಪಂಚಾಯತ್ ಸದಸ್ಯೆಯಾಗಿ, 2005 ರಿಂದ 2010ರವರೆಗೆ ಜಾಲ್ಸೂರು ಕ್ಷೇತ್ರದಿಂದ ದ.ಕ.ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದರು.
ಬಿಜೆಪಿ ಮಂಡಲ ಸಮಿತಿ ಉಪಾಧ್ಯಕ್ಷೆ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ, ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ, ಕಾರ್ಯ ನಿರ್ವಹಿಸಿದ್ದಾರೆ.
ಪ್ರಸ್ತುತ ರಾಜ್ಯ ಬಿಜೆಪಿ ಮಹಿಳಾ ಮೋರ್ಚದ ಕಾರ್ಯಕಾರಿಣಿ ಸದಸ್ಯೆಯಾಗಿ, ಕೊಡಗು ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸಹಕಾರಿ ಸಂಘಗಳಲ್ಲಿ, ಧಾರ್ಮಿಕ ಕ್ಷೇತ್ರದಲ್ಲೂ, ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಮುರುಳ್ಯ ಎಣ್ಮೂರು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ. ಸುಳ್ಯ ಭೂ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ಜಿಲ್ಲಾ ಜನತಾ ಬಜಾರ್ ನಿರ್ದೇಶಕರಾಗಿದ್ದಾರೆ. ತಾಲೂಕು ಸಹಕಾರಿ ಯೂನಿಯನ್ ಕೋಶಾಧಿಕಾರಿಯಾಗಿದ್ದಾರೆ. ಯುವತಿ ಮಂಡಲದ ಅಧ್ಯಕ್ಷೆಯಾಗಿದ್ದರು. ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷೆಯಾಗಿದ್ದರು.