*ಎಂ.ನಾ. ಚಂಬಲ್ತಿಮಾರ್.
ದಕ್ಷಿಣ ಭಾರತದ ಏಕೈಕ ಸರೋವರ ಕ್ಷೇತ್ರ ಕಾಸರಗೋಡಿನ ಕುಂಬ್ಳೆ ಸಮೀಪದ ಅನಂತಪುರದಲ್ಲಿದ್ದ ಸಸ್ಯಾಹಾರಿ ಸಾತ್ವಿಕ ಮೊಸಳೆ ಬಬಿಯಾ ಅಗಲುವುದರೊಂದಿಗೆ ಈಗ ಜನರ ಮನಸ್ಸಲ್ಲಿ ಎದ್ದಿರುವ ಕೌತುಕದ ಕುತೂಹಲಕಾರಿ ಪ್ರಶ್ನೆಯೆಂದರೆ ಕ್ಷೇತ್ರ ಸರೋವರದಲ್ಲಿ ಮತ್ತೊಂದು ಮೊಸಳೆ ಉದ್ಭವಿಸಬಹುದೇ..? ಇಡೀ ನಾಡಿಗೆ ನಾಡೇ ಕ್ಷೇತ್ರ ಕೆರೆಯಲ್ಲಿ ಮೊಸಳೆಯಿಲ್ಲದೇ ಬರಿದಾಗಬಾರದೆಂದು ಪ್ರಾರ್ಥಿಸುತ್ತದೆ. ಮತ್ತೊಂದು ಮೊಸಳೆ ಇಲ್ಲಿ ಕಾಣಿಸಿಕೊಳ್ಳಲಿ ಎಂದು ಸಕಲರ ಮನವೂ ಹಾತೊರೆದು
ಬಯಸುತ್ತಿದೆ. ಕಾರಣ ಈ ಶತಮಾನದಲ್ಲೊಮ್ಮೆಯೂ ಕ್ಷೇತ್ರದ ಕೆರೆ ಮೊಸಳೆ ಇಲ್ಲದೇ ಬರಿದಾಗಲಿಲ್ಲ, ಅದಕ್ಕೆ ನೈವೇದ್ಯ ನೀಡದೇ ಪೂಜೆ ಪೂರ್ಣಗೊಳ್ಳಲಿಲ್ಲ..!
ಆದರೀಗ ತಿರುವನಂತಪುರ ಶ್ರೀಪದ್ಮನಾಭ ಕ್ಷೇತ್ರದ ಮೂಲಸ್ಥಾನವಾದ ಅನಂತಪುರದ ಪದ್ಮಸರೋವರದಲ್ಲಿ ‘ಬಬಿಯನಿಲ್ಲ…! ಇದು ಭಾವುಕ ಮನಸ್ಸಿನ ಭಕ್ತಾದಿಗಳಿಗೆ ಕಲ್ಪಿಸಲಾಗದ ವಿಷಯ. ಆದ್ದರಿಂದ ಎಲ್ಲರ ಮನಸ್ಸೂ ಮಿಡಿಯುತ್ತದೆ. ಬಬಿಯಾ ಪುನರವತರಿಸಿ ಬರಲು ಬಯಸುತ್ತಿದೆ. ಕಳೆದ ಏಳೂವರೆ ದಶಕದಿಂದ ಕ್ಷೇತ್ರ ತಟಾಕದಲ್ಲಿ ಈಜಾಡುತ್ತಾ, ಯಾರೊಬ್ಬರಿಗೂ ಉಪಟಳ ನೀಡದೇ ಸೌಮ್ಯತೆಯೇ ಮೂರ್ತಿವೆತ್ತಂತೆ ಸಾತ್ವಿಕ, ಸಹನೆಯಿಂದ ಬದುಕಿದ್ದ ಈ ಮೂಕ ಪ್ರಾಣಿ ಸಕಲರಿಗೂ ಒಂದಚ್ಚರಿ. ಕ್ಷೇತ್ರ ತಟಾಕದಲ್ಲಿ ನಿರುಪದ್ರವಿ ಮೊಸಳೆ ಇದೆಯೆಂದರೆ ಸುಲಭದಲ್ಲಿ ಯಾರೂ ಒಪ್ಪದಿದ್ದ ವಿಷಯ. ಸಸ್ಯಾಹಾರಿ ಮೊಸಳೆಯೊಂದು ನೈವೇದ್ಯವನ್ನುಂಡು ಕ್ಷೇತ್ರಕ್ಕೆ ಕಾವಲಾಳಿನಂತೆ ಇರುತ್ತಿತ್ತೆಂಬುದು ಜಾಗತಿಕ ಅಚ್ಚರಿಯ ವಿಸ್ಮಯದ ಸುದ್ದಿ. ದೇಶದ ಸುದ್ದಿಜಾಲಗಳು ಆಗಾಗ ಇದನ್ನು ಬಿತ್ತರಿಸುತ್ತಿದ್ದವು. ಪರಣಾಮ ಹತ್ತೂರುಗಳಿಂದ ಕುತೂಹಲಗೊಂಡು ಭಕ್ತರು ಇಲ್ಲಿಗೆ ಬರುತ್ತಿದ್ದರು. ಆದರೀಗ ಬಬಿಯನಿಲ್ಲದೇ ಅನಂತಪುರ ಕ್ಷೇತ್ರದ ಆಕರ್ಷಣೆಯ ಕೊಂಡಿಯೊಂದು ಕಳಚಿದೆ.
ಬಬಿಯನಿಲ್ಲದ ಕೆರೆ ಬರಿದಾಗಿದೆ, ಭಾವನಾಶೂನ್ಯವಾಗಿದೆ. ಅ.9ರಂದು ಭಾನುವಾರ ತಡರಾತ್ರಿ ಅಗಲಿದ ಮೊಸಳೆಯ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ನಡೆಯಿತು. ಹಿಂದೂ ವೈದಿಕ ವಿಧಾನದಂತೆ ಕ್ಷೇತ್ರಾಂಗಣದಲ್ಲಿ ಮಂತ್ರಪಠಣದೊಂದಿಗೆ ತಂತ್ರಿ, ಅರ್ಚಕ ಮತ್ತು ವೈದಿಕರ ಮಾರ್ಗದರ್ಶನದಲ್ಲಿ ಸಾವಿರಾರು ಭಕ್ತಾದಿಗಳ ಭಕ್ತಿ ಭಾವುಕ ಸಂಪ್ರಾರ್ಥನೆಗಳೊಂದಿಗೆ ಮೊಸಳೆಯನ್ನು ಸಮಾಧಿ ಮಾಡಲಾಯಿತು. ಇನ್ನು ಆ ಸಮಾಧಿ ವೃಂದಾವನ ಎನಿಸಲಿದೆ. ಮುಂದೆ ಅದಕ್ಕೆ ವರ್ಷಾಂತಿಕ ಆರಾಧನೆಯೂ ಸಲ್ಲಲಿದೆ. ಅದರೊಂದಿಗೆ ಮೊಸಳೆಯೊಂದು ದೈವಿಕ ಪರಿವೇಷ ಪಡೆಯುತ್ತದೆ. ಕಾರಣ ಬಬಿಯಾ ಮೊಸಳೆ ಅನಂತಪುರದಲ್ಲಿ ಭಕ್ತರ ಪಾಲಿಗೆ ಕಣ್ಣಿಗೆ ಕಾಣುವ ದೇವರಾಗಿತ್ತು. ಕ್ಷೇತ್ರಕ್ಕಾಗಮಿಸುವ ಪ್ರವಾಸಿಗರು ಕೆರೆಯಲ್ಲಿ ಮೊಸಳೆ ಕಂಡರೆ ಅದೇ ಧನ್ಯ ಎನ್ನುತ್ತಿದ್ದರು. ಮೊಸಳೆಯ ದರ್ಶನಕ್ಕೂ ಒಂದು ಯೋಗಭಾಗ್ಯಗಳೆಲ್ಲ ಬೇಕಿತ್ತು. ಅದು ಬಂದವರಿಗೆಲ್ಲ ದರ್ಶನ ಕೊಡುತ್ತಿರಲಿಲ್ಲ. ಬರಬೇಕಿದ್ದರೆ ಪ್ರೀತಿಯ ಒಲುಮೆಯಿಂದ ‘ಬಬಿಯಾ..’ ಎಂದು ಕರೆಯಬೇಕಿತ್ತು. ಇನ್ನು ಯಾರನ್ನು ಕರೆಯುವುದು…?
ಅನಂತಪುರದ ಆಕರ್ಷಣೆಯೇ ಬಬಿಯ. ಆತನಿಗೆಂದೇ ನೀಡುವ ಆಹಾರಗಳು ಕ್ಷೇತ್ರದ ಸೇವೆಯೂ ಆಗಿತ್ತು, ಬರುವ ಭಕ್ತಾದಿಗಳೆಲ್ಲ ಬಬಿಯನಿಗೊಂದು ಸೇವೆ ಮಾಡಿಸುತ್ತಿದ್ದರು. ಕಾರಣ ಆತ ಕೇವಲ ಮೊಸಳೆಯಲ್ಲ, ದೇವತಾಸಾನ್ನಿದ್ಯವೆಂಬ ನಂಬಿಕೆ. ಸ್ವಭಾವತಃ ಮೊಸಳೆ ಕ್ರೂರ ಪ್ರಾಣಿ. ಅದು ರಕ್ತದಾಹಿ
ಹಿಂಸಾ ಪ್ರವೃತ್ತಿ ಅದಕ್ಕೆ ಜನ್ಮದತ್ತ. ಆದರೆ ಅನಂತಪುರದಲ್ಲಿದ್ದ ಯಾವ ಮೊಸಳೆಯೂ ಈ ಥರ ಇರಲೇ ಇಲ್ಲ ಎಂಬುದು ಜೀವಜಾಲದ ವಿಚಿತ್ರ, ವಿಸ್ಮಯ. ಸ್ವಾತಂತ್ರ್ಯ ಪೂರ್ವದಲ್ಲೇ ಅನಂತಪುರದಲ್ಲಿ ಮೊಸಳೆ ಇತ್ತು. ಆದರೆ ಈ ಪ್ರದೇಶದಲ್ಲಿ ಹಿಂದೆ ಬ್ರಿಟೀಷರ ಮಿಲಿಟರಿ ಕ್ಯಾಂಪಿತ್ತು. ಒಂದೊಮ್ಮೆ ಬ್ರಿಟೀಷ್ ಸೈನಿಕನೊಬ್ಬ ಮೊಸಳೆಯನ್ನು ಗುಂಡಿಕ್ಕಿ ಕೊಂದನು. ಆದರೆ ಅದೇ ಕ್ಷಣದಲ್ಲಿ ಮೇಲಿದ್ದ ಮರದಿಂದ ಉಡವೊಂದು ಆತನ ತಲೆಗೆ ಬಿದ್ದು ಆತ ಮಡಿದನೆಂದು ಹಿಂದಿನ ತಲೆಮಾರಿನವರು ಹೇಳುತ್ತಿದ್ದರು.
ಅನಂತಪುರದ ದೇವರ ಮೊಸಳೆ ಬಬಿಯಾ ಇನ್ನಿಲ್ಲ- ಏಳು ದಶಕದ ವಿಸ್ಮಯದ ಬದುಕಿಗೆ ತೆರೆ
The Sullia Mirror YouTube Channel
ಈ ಘಟನೆ ನಡೆದ ಒಂದೇ ವಾರದೊಳಗೆ ಕ್ಷೇತ್ರದ ಕೆರೆಯಲ್ಲಿ ಮತ್ತೊಂದು ಮೊಸಳೆ ಕಾಣಿಸಿಕೊಂಡಿತ್ತು. ಹೀಗೆ ಕಾಣಿಸಿಕೊಳ್ಳುವಾಗ ಅದು ಬರೇ ಚಿಕ್ಕದೇನೂ ಆಗಿರಲಿಲ್ಲ. ಆ ಮೊಸಳೆಯೇ ಈಗ ಅಗಲಿ ಶೂನ್ಯತೆ ಸೃಷ್ಟಿಸಿರುವ ಬಬಿಯಾ. ಅದಕ್ಕೀಗ ಎಂಭತ್ತರ ಆಸೂಪಾಸಿನ ವಯಸ್ಸು. ಒಟ್ಟಿನಲ್ಲಿ ಅನಂತಪುರ ಕ್ಷೇತ್ರ ತಟಾಕ ಬಬಿಯನಿಲ್ಲದೇ ಬರಿದಾಗಿದೆ. ಮತ್ತೊಂದು ಮೊಸಳೆ ಇಲ್ಲಿನ ಕೆರೆಯಲ್ಲಿ ಕಾಣಿಸಿಕೊಳ್ಳಲಿ ಎಂಬುದು ಭಕ್ತ ಮನಸ್ಸಿನ ಪ್ರಾರ್ಥನೆ. ಅಂದಹಾಗೆ ಅನಂತಪುರ ಕ್ಷೇತ್ರ ಮತ್ತೊಮ್ಮೆ ಬ್ರಹ್ಮಕಲಶಕ್ಕೆ ಸಿದ್ಧತೆ ಆರಂಭಿಸಿದೆ. ಈ ಸಂದರ್ಭದಲ್ಲೇ ಬಬಿಯನ ವಿಯೋಗವಾಗಿದೆ.
ಇಷ್ಟಕ್ಕೂ ಈ ಗ್ರಾಮದ ಜನತೆಯ ಬದುಕಿಗೂ ಮೊಸಳೆಗೂ ಆತ್ಮೀಯ ನಂಟಿದೆ. ಹಿಂದೆ ಇದು ನಿರ್ಜನ ಪ್ರದೇಶ. ಕೆಲವೇ ಕೆಲವು ಮನೆಗಳಿದ್ದುವು. ಅವರೆಲ್ಲ ಕ್ಷೇತ್ರದ ಕೆರೆಯಲ್ಲಿ ಈಜಲು, ಬಟ್ಟೆ ಒಗೆಯಲು ತೆರಳುತ್ತಿದ್ದವು. ಅದೇ ಕೆರೆಯಲ್ಲಿ ಮೊಸಳೆಯೂ ಇತ್ತು. ಮಕ್ಕಳನ್ನೆಲ್ಲ ಈ ಮೊಸಳೆಯನ್ನು ತೋರಿಸಿಯೇ ಹೆದರಿಸಲಾಗುತಿತ್ತು. ಆದರೆ ಮೊಸಳೆ ನಿರುಪದ್ರವಿ ಎಂದು ತಿಳಿದ ಮೇಲೆ ಎಲ್ಲರಿಗೂ ಆದರ ಮೇಲೊಂದು ಅಕ್ಕರೆಯ ಒಲವು. ಬಹುಶಃ ಹಿಂಸಾ ಪ್ರವೃತ್ತಿಯ ಕ್ರೂರಪ್ರಾಣಿಯೊಂದು ಮನುಷ್ಯನೊಲವು ಪಡೆದ, ಸಾಕ್ಷಾತ್ ದೇವರೆಂದೇ ಆರಾಧನೆಗೊಂಡ ಜಗತ್ತಿನ ಏಕೈಕ ಘಟನೆ ಇದು. ದೇವರ ಆರಾಧನೆಯೆಂಬ ಭಕ್ತಿ ಎಂದರೆ ಪ್ರೀತಿ ಮತ್ತು ವಾತ್ಸಲ್ಯದ ಒಲವು ಅಲ್ಲದೇ ಮತ್ತೇನಲ್ಲ ಎಂದು ಶೇಣಿ ಗೋಪಾಲಕೃಷ್ಣ ಭಟ್ಟರು ಹೇಳುತ್ತಿದ್ದ ಮಾತು ಮತ್ತೆ ನೆನಪಾಯಿತು..
ಜತೆಯಲ್ಲೇ ಹಿಂಸೆಯನ್ನೇ ಪ್ರವೃತ್ತಿ ಮಾಡಿಕೊಂಡ ಕ್ರೂರ ಬೇಡನೊಬ್ಬ ಪರಿಷ್ಕೃತನಾಗಿ ರಾಮನಾಮದ ಬಲದಿಂದ ಮಹರ್ಷಿ ವಾಲ್ಮೀಕಿಯಾದ ಶಾಪಮೋಕ್ಷದ ಕತೆಯೂ ನೆನಪಾಯಿತು. ಏಕೆಂದರೆ ಕ್ಷೇತ್ರ ಕೆರೆಯಲ್ಲಿ ಮೊಸಳೆಯಾಗಿ ಕಂಡು ಬಂದು ಜನರಿಂದ ಒಲವಿನ ಆರಾಧನೆ ಪಡೆದ ಈ ಮೊಸಳೆಯ ಬದುಕೂ ಶಾಪಮೋಕ್ಷದ ಪಯಣವಲ್ಲವೆಂದು ನಂಬುವುದು ಹೇಗೆ..?
(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು).