ನಾಮಕ್ಕಲ್: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿನ ಎಟಿಎಂ ಒಡೆದು 68 ಲಕ್ಷ ದರೋಡೆ ಮಾಡಿದ ಕಳ್ಳರ ತಂಡವನ್ನು ತಮಿಳುನಾಡು ಪೊಲೀಸರು ಸಿನಿಮೀಯ ಮಾದರಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸರ ಗುಂಡಿಗೆ ಒಬ್ಬ ಮೃತಪಟ್ಟಿದ್ದು, ಆರು ಜನರನ್ನು ವಶಕ್ಕೆ ಪಡೆಯಲಾಗಿದೆ.ಕೇರಳದಲ್ಲಿ ಕೃತ್ಯ ಎಸಗಿದ ಹರಿಯಾಣ ಮೂಲದ ತಂಡ
ಕಂಟೈನರ್ ಮೂಲಕ ತಮಿಳುನಾಡನ್ನು ಪ್ರವೇಶಿಸಿದ್ದರು. ಕೇರಳದಲ್ಲಿ ಎಟಿಎಂ ದಡೋಡೆ ಸಂದರ್ಭದಲ್ಲಿ ಬಳಸಿದ್ದ ಕಾರನ್ನು ಟ್ರಕ್ನೊಳಗೆ ಬಚ್ಚಿಟ್ಟಿದ್ದರು.ಇದನ್ನು ಪತ್ತೆ ಮಾಡಿದ ಪೊಲೀಸರು ಈ ತಂಡವನ್ನು ಬೆನ್ನಟ್ಟಿದರು. ಪೊಲೀಸರು 12 ಕಿ.ಮೀ.ವರೆಗೆ ಬೆನ್ನಟ್ಟಿ ವಶಕ್ಕೆ ತೆಗೆದುಕೊಂಡಿದ್ದಾರೆ.ಈ ಸಂದರ್ಭದಲ್ಲಿ ಈ ತಂಡ ಪೊಲೀಸರ ಮೇಲೆ ದಾಳಿ ಮಾಡಿದೆ. ಆತ್ಮರಕ್ಷಣೆಗಾಗಿ ಆರೋಪಿಗಳತ್ತ ಪೊಲೀಸರು ಗುಂಡು ಹಾರಿಸಿದರು. ಇದರಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಂಟೈನರ್ ಟ್ರಕ್ ಅನ್ನು ತಮಿಳುನಾಡು ಪೊಲೀಸರು ಹೆದ್ದಾರಿಯಲ್ಲಿ ತಡೆದಾಗ ಅದು ನಿಲ್ಲದೆ ವೇಗವಾಗಿ ಸಾಗಿತ್ತು. ಈ ಸಂದರ್ಭ ಅದು ಎರಡು ದ್ವಿಚಕ್ರ ವಾಹನಗಳಿಗೂ ಡಿಕ್ಕಿ ಹೊಡೆದಿತ್ತು. ಕಂಟೈನರ್ ವಾಹನದ ಹಿಂದಿನ ಬಾಗಿಲನ್ನು ತೆರೆಯಿಸಿದಾಗ, ಒಳಗಿದ್ದವರು ಪೊಲೀಸರ ಮೇಲೆ ದಾಳಿ ನಡೆಸಿದರು. ಕಂಟೈನರ್ ಟ್ರಕ್ನಲ್ಲಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಗ್ಯಾಸ್ ಕಟ್ಟರ್ಗಳು ಮತ್ತಿತರ ಉಪಕರಣಗಳು ಕೂಡಾ ಕಂಟೈನರ್ನಲ್ಲಿ ಪತ್ತೆಯಾಗಿವೆ.
ಸಿಸಿಟಿವಿಯಲ್ಲಿ ಕಂಟೈನರ್ ವಾಹನದ ದೃಶ್ಯಗಳು ಸೆರೆಯಾಗುವುದನ್ನು ತಪ್ಪಿಸಲು ಆರೋಪಿಗಳು ತಾವು ದರೋಡೆ ನಡೆಸಲು ಉದ್ದೇಶಿಸಿದ ಎಟಿಎಂಗಳಿಗೆ ಹೊಂಚುಹಾಕಲು ಈ ಕಾರನ್ನು ಬಳಸುತ್ತಿದ್ದರು. ಆನಂತರ ಅದನ್ನು ಕಂಟೈನರ್ ವಾಹನದೊಳಗೆ ಅಡಗಿಸಿಡುತ್ತಿದ್ದರೆಂದು ಪೊಲೀಸರು ಹೇಳಿದ್ದಾರೆ.
ಬಂಧಿತರಿಂದ ದೋಚಿದ ಹಣವನ್ನು ವಶಕ್ಕೆ ಪಡೆಯಲಾಗಿದೆ. ತ್ರಿಶೂರ್ನಲ್ಲಿನ ಶುಕ್ರವಾರ ನಸುಕಿನ 2ರಿಂದ 4ರ ಅವಧಿಯಲ್ಲಿ 3 ಎಟಿಎಂ ದರೋಡೆ ನಡೆದಿದೆ. ಸಿಸಿಟಿವಿ ಕ್ಯಾಮೆರಾ ನಾಶಗೊಳಿಸಿದ್ದರು. ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ತೆರೆದು, ಹಣ ದೋಚಿದ್ದರು. ಕೃತ್ಯ ನಡೆಯುತ್ತಿದ್ದಂತೆ ಪೊಲೀಸರಿಗೆ ಬಂದ ಎಚ್ಚರಿಕೆಯ ಕರೆ ಆಧರಿಸಿ, ಕೇರಳ ಪೊಲೀಸರು ಕಾರ್ಯಪ್ರವೃತ್ತರಾದರು. ಅಷ್ಟರೊಳಗೆ ದರೋಡೆಕೋರರು ತಮಿಳುನಾಡು ಪ್ರವೇಶಿಸಿದ್ದರು.