*ಚಂದ್ರಾವತಿ ಬಡ್ಡಡ್ಕ.
ಈ ನಮ್ಮ ಉದಯ ಸರಾಗ ಎರ್ಡೆರ್ಡ್ ಸೆರ್ತಿ ಮಂಗ್ಳೂರುಗೆ ಹೋಗೀತ್. ಗೂಡೆ ಮನಿ ಸೆಟ್ಟಾತೋಂತ ಕೇಳ್ಯೇ ಬುಡೊಮೋಂತ ಫೋನ್ ಕೈಗೆ ತಕಂಡೆ. ನಾ ಫೋನ್ ಮಾಡಿಕೆ ಇದ್ದವುಕೆಲ್ಲ ಫೋನ್ ಮಾಡ್ದು ವಾಕಿಂಗ್ ಮಾಡಿಕನ. ಒಂದು, ಟೈಮ್ ಯೂಸ್ ಆದೆ.
ಎರಡ್ನೆದ್ ನಡಿಯಕನ ಬೋರ್ ಆದುಲೆ ಮತ್ತೆ ಟೈಮ್ ಹೋದೇ ಗೊತ್ತಾದುಲೆ. ಹಾಂಗೆ ಫೋನ್ ಮಾಡ್ರೆ ಅತ್ತಂದ ಅವನ ಫೋನ್ ಎಂಗೇಜ್. ಅರ್ಧಗಂಟೆ ಕಳ್ದ್ ವಾಪಾಸ್ ಫೋನ್ ಮಾಡ್ರೆ ವಾಪಾಸ್ ಎಂಗೇಜ್. ಗೇರೆಂಟಿ ಯಾದೋ ಬಲೆಗೆ ಬಿದ್ದಿರೊಕೂಂತ, ತೆಗ್ದ್ ಬೆಂಗ್ಳೂರು ಅತ್ತೆನೊಟ್ಟಿಗೆ ಮಾತಾಡೊಮೋಂತೇಳಿ ಅತ್ತೆನ ನಂಬರ್
ಒತ್ತಿಕನ ಇತ್ತಂದ ಉದಯ ಕಾಲಿಂಗ್. ವಾಕಿಂಗ್ ಮಾಡ್ತಿದ್ದ ನಾ, ಎಂತ ಮಾರಾಯ, ಏನಾರ್ ಸೆಟ್ಟಾಗುಟೋಂತ ಕೇಳೊಕೂಂತ ಸೇಂಕ್ಯಂಡ್ ಬಾಯಿ ಬುಡಿಕೆ ಮುಂದೆ ಅವನೇ, ಅಕ್ಕಾ ಈ ಸರ್ಕಾರ ಮೊದುವೆ ಆಗದ ನಮ್ಮಂತವರ ವಿರೋಧಿ ಸರ್ಕಾರ ಅಕ್ಕಾ…… ವಿರೋಧಿ ಸರ್ಕಾರಾಂತ ಅವನ ರೋದನೆ ಸುರು ಮಾಡ್ತ್. ಅಲ್ಲ ಮಾರಾಯ ನಿಂಗೆಂತ ಮಾಡ್ತ್ ಸರ್ಕಾರ, ಬಡವರ ಬಂಧು ಸರ್ಕಾರ, ನೀ ಬಡಂವ ಅಲ್ಲನೋಂತ ಅವನನೂ ಬಡಂವ ಮಾಡಿಕೆ ನೋಡ್ದೆ.
ಅಲ್ಲ, ಎಂತಕ್ಕ ಹೆಳ್ಮಕ್ಕಳಿಗೆ ಎರ್ಡ್ ಸಾವ್ರ ರೂಪಾಯಿಗಡ, ಬಸ್ಸ್ಲಿ ಧರ್ಮಕೆ ಹೋಕೆಗಡ, ಮನೆಗೆ ಕರೆಂಟ್ಗಡ, ತಲೆಗೆ ಹತ್ತ್ ಕೆಜಿ ಅಕ್ಕಿಗಡ….. ಇದ್ ನಂಗೆ ಸಿಕ್ಕಿದೆನೋಂತ ಕೇಳ್ತ್. ಏನ್ ಸಿಕ್ಕದೆ ನಿನ್ನ ಅಯ್ಯೆಗೂ ಅಕ್ಕಂಗೂ ಬೇರೆಬೇರೆ ಮನೆಮಾಡ್ರೆ ನಾಲ್ಕ್ ಸಾವ್ರ ಸಿಕ್ಕಿದಾಂಗಾತಲೇಂತ ಲೆಕ್ಕ ಮಾಡ್ದೆ. ನಿಮ್ಮ ತಲೆ, ನಂಗೆ ಮೊದುವೆ ಆಗೀದರೆ ನನ್ನ ಹೆಣ್ಣ್ಗೂ ಸಿಕ್ಕ್ತಿತ್ಲೆನಾಂತ ಪ್ರಶ್ನೆ ಮಾಡ್ತ್. ಹೌದಲ್ಲ ಮಾರಾಯ, ಈಗ ನಾ ಎಂತರ ಮಾಡೊಕು, ಎಲ್ಲ ತಂದ್ ನನ್ನ ತಲೆಗೆ ಕಟ್ಟಿಯನಾಂತ ಕೇಳ್ದೆ. ನೀವುಗೆ ಒಂದು ಗೂಡೆ ನೋಡಿಕೆ ಆತ್ಲೇಂತ ಹಂಞ ಸೀರಿಯಸ್ಸ್ ಆಗಿಯೇ ಅಸಮಾಧಾನ ತೋರ್ಸಿತ್. ಹಂಞ ತಡ್ಕ, ಈ ಯೋಜನೆಗ ಜಾರಿ ಆಕೆ ಹನಿಸ್ ಟೈಮ್ ಉಟ್ಟಲ್ಲ, ಅಷ್ಟರ್ಲಿ ಏನಾರ್ ಆದೆನಾ ನೋಡೋಮೋಂತ ಅವನ ಸಮ್ದಾನ ಮಾಡ್ದೆ. ಎಂತರ ಮಾಡ್ದೂಂತ ಯೇಚನೆ ಮಾಡ್ರೆ ಏನೂ ಹೊಳ್ತ್ಲೆ. ದಮ್ಮಯ ನನ್ನ ತಮ್ಮಂಗೊಂದು ಗೂಡೆ ಆಕು ಎಲ್ಲಾರ್ ನೆಂಟಸ್ತಿಕೆ ಇದ್ದರೆ ಹೇಳಿಂತೇಳಿ ಸಾರ್ವಜನಿಕ ಆಗಿ ದಮ್ಮಯ ಹಾಕುದರ ಬುಟ್ರೆ ನಂಗೆ ಬೇರೆ ದಾರಿ ಕಾಂಬೊದ್ಲೆ.
ಇಲ್ಲರೂ ಸಾ ಅಲ್ಲಾ, ಸರ್ಕಾರ ಅವಿವಾಹಿತರ ಕಷ್ಟನನೂ ಚೂರು ಅರ್ಥ ಮಾಡಿಕಣಕಾಯ್ತ್. ಅವುಕೆನೂ ಏನಾರ್ ಒಂದು ಸ್ಕೀಂ ಬೇಕಾಯ್ತ್. ಅವಿವಾಹಿತರಿಗೆ ‘ವಿವಾಹ ಭತ್ಯೆ’ ಸ್ಕೀಂ ವರ್ಕೌಟ್ ಆದೋ…. ಓಟುಗೆ ಮುಂದೆ ಪ್ರಣಾಳಿಕೆ ತಯಾರಾಕನ ನೀ ಅವಿವಾಹಿತರ ಕಷ್ಟ ಹೇಳಿಕಣದೆ, ಈಗ ನನ್ನ ತಲೆ ತಿಂದರೆ ನಾ ಏನ್ ಮಾಡ್ದೂಂತ ಉದಯನ ಬಾಯಿ ಮಚ್ಚಿಸಿರೂ ಅಂವ ಎತ್ತಿದ ಪೋಯಿಂಟ್ ಸೆರಿ ಉಟ್ಟಲಾ. ಅವಿವಾಹಿತರಿಗೆ ವಿವಾಹ ಭತ್ಯೆಂತ ನಾವುಗೆನೂ ಎರ್ಡೋ- ಮೂರೋ ಸಾವಿರ ತಿಂಗಳಿಗೆ ಕೊಟ್ಟಿದರೆ ಅದರ ನೋಡ್ಯಾರ್ ಯಾದಾರ್ ಗೂಡೆಗೆ ಒಪ್ಪಿದೋ ಏನೋಂತ….. ಅವಂದೊಂದು ಆಸೆ! ಅವನ ಆಸೆಲಿ ಲಾಜಿಕ್ ಉಟ್ಟೂಂತ ನಂಗೆ ಆನ್ಸಿತ್.
“ಅವಿವಾಹಿತರನ್ನು ಕಡೆಗಣಿಸಿದ ಸರ್ಕಾರ, ಈಗ ಮದುವೆ ಆಗದೆ ನನಿಗೆ ನೋಡಿ ತಿಂಗಳಿಗೆ ಎರಡು ಸಾವಿರ ಲಾಸ್, ತಿಂಗಳಿಗೆ ಹತ್ತು ಕೆಜಿ ಅಕ್ಕಿ ಲಾಸ್. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಈಡೇಸುವ ಮುಂಚೆ ನಂಗೊಂದು ಮದುವೆ ಆಗ್ಬೇಕು” ಹೀಂಗೆ ಹೇಳಿ ಫೋನು ಇಸಿತ್. ಹದ್ನೈದ್ ದಿನಲಿ ಮೊದುವೆ ಆಕುಂತಾರೆ ಅದ್ ಅಷ್ಟ್ ಸುಲ್ಬನೋ? ಅದೂ ಅಲ್ಲದೆ ಅವಂಗೆ ಜಾತಿನ ಗೂಡೆನೇ ಆಕಡ. ನೀ ಎಂತ ನಮ್ಮದ್ ಜಾತ್ಯತೀತ ರಾಷ್ಟ್ರ ಅಲ್ಲನೋ, ಜಾತಿ ಗೂಡೆನೇ ಬೇಕೂಂತೇಳ್ರೆ ಹೇಂಗೇಂತ ಸಮಾಜವಾದ ಮಾತಾಡ್ದೆ. ಅದ್ಕೆ “ಜಾತ್ಯತೀತತೆ ಅಂತ ಹೇಳ್ರೆ ಅತೀ ಜಾತೀಯತೇಂತ” ಅಂವ ಅವನ ಮಂಡೆಬೆಚ್ಚದ ಎಡೆಲಿನೂ ನಂಗೆ ಉಪದೇಶ ಮಾಡಿ, ನಂಗೆ ತೊಂದರೆ ಇಲ್ಲೆ; ಮನೆಲಿ ಒಪ್ಪುದು ಡೌಟುಂತ ಹೇಳ್ತ್.
ಇದಲ್ಲದೆ ಅಂವಂದ್ ಈಗ ಇನ್ನೊಂದು ಕಂಡೀಶನ್ ಉಟ್ಟು. ಮುಂದೆಲ್ಲಾದರೆ ಜಾಸ್ತಿ ಪ್ರಾಯ ವ್ಯತ್ಯಾಸ ಇರುವ ಗೂಡೆ ಬೇಡ ಅಕ್ಕಾಂತ ಹೇಳ್ತಿದ್ದವ, ಈಗ ನಂಗೆ 2022-23ರ ಬ್ಯಾಚ್ಲಿ ಡಿಗ್ರಿ ಆದ ಗೂಡೆನೇ ಆಕೂಂತ ಹಠ ಮಾಡಿಕೆ ಸುರುಮಾಡಿಟು. ನಿರುದ್ಯೋಗಿಗಳಿಗೆ ಕೊಡುವ ಮೂರ್ ಸಾವ್ರ ಸಿಕ್ಕಿರೆ ಅದೂ ಆತಲೇಂತ ಅವನ ಐಡಿಯಾ.
ಈಗ ಎಲ್ಲಿ ಹೋದರೂ ಈ ಉಚಿತ-ಖಚಿತದ್ದೇ ಮಾತ್. ಮಾತಾಡಿಕೆ ಎರ್ಡೇ ಇಸಯ. ಒಂದು ಬಿಸ್ಲ್ ತಪ್ಪಿರೆ ಮಳೆ, ಇನ್ನೊಂದು ಹೊಸ ಸರ್ಕಾರ ಮತ್ತೆ ಸರ್ಕಾರದ ಗೇರೆಂಟಿಗ. ನಮ್ಮ ಗೊಡಲ್ಕರೆ ಅಣ್ಣಯ್ಯ ಸಣಪನ ದೊಡ್ಡ ಮಂಙ ಮೊನ್ನೆ ಒಂದು ಮೊದಿಯೆಲಿ ಸಿಕ್ಕಿದೋ. ಏನ್ನೇ ಗೂಡೆ, ಬಾರಿ ರಾಜಕೀಯ ಬರ್ದ್ಯ, ನೀ ಏನೇ ಹೇಳ್ ಸರ್ಕಾರ ಗಳ್ಮಕ್ಕಳಿಗೆ ಮಾತ್ರ ಅನ್ಯಾಯ ಮಾಡ್ತ್ಂತ ನನ್ನ ಮೇಲೆ ಆರೋಪದ ರೋಪ್ ಹಾಕಿದೋ. ಎಂತ ರಾಜಕೀಯ ಬರಿದು ಅಣ್ಣ, ಓಟುನ ಸಮಯಲಿ ಹಂಞ ಬರ್ದದಷ್ಟೆ ಮತ್ತೇನಿಲ್ಲೆಂತ ಹೇಳಿ, ಗಳ್ಮಕ್ಕಳಿಗೆ ಎಂತ ಅನ್ಯಾಯ ಆಗುಟೂಂತ ಕೇಳ್ದೆ. “ಎರ್ಡ್ ಸಾವ್ರ ಮನೆ ಯೆಜಮಾಂತಿಗೆ. ಕರೆಂಟ್ ಮನೆಗಾತ್. ಅಕ್ಕಿ ಸಂಸಾರಕಾತ್. ಸರ್ಕಾರದ ಬಸ್ಸ್ಲಿ ನಿಮ್ಮಂತ ಹೆಳ್ಮಕ್ಕಳಿಗೆ ಮಾತ್ರ ಧರ್ಮಕೆ ಹೋಕೆಗಡ. ಆಗ ನಾನು ನನ್ನ ಹೆಣ್ಣ್ನು ಎಲ್ಯಾರ್ ಹೋಕರೆ ಏನ್ಮಾಡ್ದೂಂತ” ನನ್ನ ಪ್ರಶ್ನೆ ಮಾಡ್ದೋ. ಹಾಂಗೆ ಹೋಕರೆ ಹೋಕನ ನೀವುಗೆ ತಿಕೆಟ್ ತಕಂಡ್ರೆ ಆತ್ಂತ ಹೇಳ್ದೆ. ಹ್ಞಾ… ನನ್ನ ಹೆಣ್ಣ್ ಮುಂದೇ ಜೋರು.. ಇನ್ನ್ ಒಟ್ಟೂ ಕೇಳ್ದು ಬೇಡ. ಎಲ್ಯಾರ್ ಹೋರ್ಡಿಕನ ಬೊಗುಳಾದೆ ಮನೆಲಿ ಕುದ್ರಿ, ನಾವು ಹೋಗಿ ಬಂದವೇಂತ ಮಗಳ ಕರ್ಕಂಡ್ ಹೋಕುಟ್ಟು ಇನ್ನ್ಂತ ಅವರ ಕಷ್ಟ ಹೇಳಿಕಂಡೋ. ಇಲ್ಲರೇ ಅದ್ಕೆ ತುಕ್ಕಿ ತಿರ್ಗಿಕೆ ಕುಸಿ. ಇನ್ನ್ ಧರ್ಮಕೇಂತೇಳ್ರೆ ಕೇಳ್ದ್ ಬೇಡ. ನಂಗೆ ತೆಳಿ ಕುಡ್ಯಕೊರೆ ನಾನೇ ಕಾಸಿಕಣೊಕಾದೆನೋ, ಹೇಂಗೆ ಸಾವೋ… ನೋಡೋಕಿನ್ನ್ತೇಳ್ದೋ. ಹಾಂಗೆಲ್ಲ ಏನ್ ಆದ್ಲೆಯಾ ಅಣ್ಣಾ, ಈ ಬಿಸ್ಲ್ಗೆ ಯಾರ್ ಹಾಂಗೆಲ್ಲ ತಿರ್ಗುವೇಂತ ಅವರ ಸಮ್ದಾನ ಮಾಡ್ದೆ.
ಅಲ್ಲನೇ……, ನಿನ್ನ ಸರ್ಕಾರಕೆ ಗಂಡ್ಗಳಿಗೂ ಏನಾರ್ ಧರ್ಮಕೆ ಕೊಡಕಾಯ್ತಲೇಂತ ಹೇಳ್ದೋ. (ಅವು, ಅವರ ಮಾತ್ಲಿ ಸರ್ಕಾರನ ನಂಗೆ ಕೊಟ್ಟೋಂತ ನಂಗೆ ನೆಗೆ ಬಾತ್) ನಾವು ಬಡ ಗಳ್ಮಕ್ಕ ಬಂಗ ಬಂದ್ ಕೆಲ್ಸ ಮಾಡಿಕನ ನಾವುಗೆನೂ ಉಲ್ಲಾಸ ಆಬಡನಾ ಒಂದ್ ಕೋಟ್ರ್ ಕೊಟ್ಟಿದರೆ ಏನಾಗೀತ್ ಸರ್ಕಾರಕೆ? ಬಿಸ್ಲಿ ಮಳೆಲಿ ಮೈಹೊಡಿ ಮಾಡಿ ಕೆಲ್ಸ ಮಾಡಿ ಹಿಂಬೊತಾಕನ ಒಂದು ಚೆಕ್ಕಳ ಹಾಕಂಡ್ರೆ ಲಾಯ್ಕಾದೆ. ಮೊನ್ಸ್ಗೆ ಉಲ್ಲಾಸ ಆದೆ, ಸೈರ ಹಗೂರಾದೆ. ಇಷ್ಟೆಲ್ಲ ಖರ್ಚಿ ಮಾಡಿಕನ ಮನೆ ಯಜಮಾನಂಗೊಂದು ಕೋಟ್ರ್ ಕೊಡ್ದು ದೊಡ್ಡ ಸಂಗತಿ ಆಗಿರ್ದಾಂತ ಕೇಳ್ದೋ. ನಾ ಇದ್ಕೆ ಎಂತರ ಹೇಳ್ದು?
ಅಂದ್ ಕೊರೋನಾ ಟೈಮ್ಲಿ ಕಂಗಾಲಾದ ಸರ್ಕಾರಕೆ ತಾಂಗ್ ಕೊಟ್ಟದೇ ಕೋಟ್ರ್ ಕುಡ್ಯವು. ಆಗ ಅವೆಲ್ಲ ನಮ್ಮ ಇನ್ನ್ ಕುಡ್ಕರ್ಂತ ಹೇಳಿಕೆ ಬೊತ್ತು. ‘ಇಕಾನಮಿ ವಾರಿಯರ್ಸ್ಂತ’ ಕರಿಯೊಕೂಂತ ಡಿಮಾಂಡ್ ಮಾಡೀದೋ. ದೇಸದ ದುಡ್ಡುನ ವೈವಾಟ್ಗೆ ಸಪೋರ್ಟ್ ಮಾಡುವ ಇಂತವುಗೆ ಧರ್ಮಕೆ ಕೊಟ್ಟ್ ಅವರ ತಾಪು ಮಾಡಿಕೆ ಬೊತ್ತುಂತ ಆಗಿರಿಕೂ ಸಾಕ್. ಇಲ್ಲರೆ ಸರ್ಕಾರ ಇಂತ ‘ಬಹುಜನರ ಬೇಡಿಕೆ’ ಈಡೇರ್ಸ್ತ್ತಿತ್ತೋ ಏನೋ……?
(ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು).