ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಡೆಕೋಲು ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಅರೆಭಾಷೆ ಗಡಿನಾಡ ಉತ್ಸವವು ಡಿಸೆಂಬರ್ 1ರಂದು ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ಅಮೃತ ಸಭಾಭವನದಲ್ಲಿ’ ನಡೆಯಲಿದೆ. ಅರೆಭಾಷೆ ಉತ್ಸವಕ್ಕೆ ಮಂಡೆಕೋಲು ಸಿದ್ಧಗೊಂಡಿದೆ.
ಅರೆಭಾಷೆ ಅಕಾಡೆಮಿ ವತಿಯಿಂದ ನಡೆಯುತ್ತಿರುವ ಮೂರನೇ ಗಡಿನಾಡ ಉತ್ಸವವಾಗಿದ್ದು, ಅರೆಭಾಷೆ ಅಕಾಡೆಮಿ ಅಸ್ತಿತ್ವಕ್ಕೆ ಬರಲು ಕಾರಣರಾದ
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಮತ್ತು ಅಕಾಡೆಮಿಯ ಹಾಲಿ ಅಧ್ಯಕ್ಷರಾದ ಸದಾನಂದ ಮಾವಜಿ ಇವರುಗಳ ಹುಟ್ಟೂರಾಗಿರುವ ಮಂಡೆಕೋಲು ಈ ನಿಟ್ಟಿನಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಡಿಸೆಂಬರ್ 1 ರಂದು ಬೆಳಗ್ಗೆ 9.00 ಗಂಟೆಗೆ ‘ಫಾರೆಸ್ಟ್ ಬಂಗಲೆ’ ಬಳಿಯಿಂದ ಮೆರವಣಿಗೆ ಹೊರಡುವುದರೊಂದಿಗೆ ಉತ್ಸವ ಆರಂಭಗೊಳ್ಳುತ್ತದೆ. ಪ್ರಗತಿಪರ ಕೃಷಿಕ ಹಾಗೂ ಸಾಮಾಜಿಕ ಧುರೀಣ ಕುಶಾಲಪ್ಪ ಗೌಡ ಕುಕ್ಕೇಟಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನಂತರ ಬೆಳಗ್ಗೆ 10 ಗಂಟೆಯಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ಜಾಕೆ ಸದಾನಂದ ಗೌಡ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಇದೇ ಸಂದರ್ಭದಲ್ಲಿ
ಅರೆಭಾಷೆ ತ್ರೈಮಾಸಿಕದ ಸಂಯುಕ್ತ ಸಂಚಿಕೆ ಹಿಂಗಾರ ಬಿಡುಗಡೆಗೊಳ್ಳಲಿದೆ.
ನಂತರ 11 ಗಂಟೆಯಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ‘ಅರೆಭಾಷೆ ಸಂಸ್ಕೃತಿನ ಉಳ್ಸಿ, ಸಾಹಿತ್ಯನ ಬೆಳ್ಸುವ ಕಾರ್ಯ’ ಕುರಿತು ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯರು ಹಾಗೂ ಸೈಂಟ್ ಅಲೋಷಿಯಸ್ ಕಾಲೇಜಿನ ಪ್ರಾಧ್ಯಾಪಕರಾಗಿ ರುವ ಡಾ.ವಿಶ್ವನಾಥ ಬದಿಕಾನ ಉಪನ್ಯಾಸ ನೀಡಲಿದ್ದಾರೆ.
12ಗಂಟೆಯಿಂದ ಅಕಾಡೆಮಿ ಪ್ರಕಟಿಸಿದ ಪುಸ್ತಕಗಳ ಕುರಿತು ಅವಲೋಕನ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸಂಗೀತಾ ರವಿರಾಜ್ ಹೊಸೂರು, ಲೀಲಾ ದಾಮೋದರ, ಯೋಗಿಶ್ ಹೊಸೊಳಿಕೆ ಹಾಗೂ ಹೇಮಲತಾ ಗಣೇಶ್ ಕಜೆಗದ್ದೆ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ 3 ರಿಂದ ಸಮಾರೋಪ ನಡೆಯಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಘನ ಉಪಸ್ಥಿತಿ ಇರಲಿದೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ದೀಪ ಪ್ರಜ್ವಲನ ಮಾಡಲಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್ ಸನ್ಮಾನ ಕಾರ್ಯ ನೆರವೇರಿಸಲಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಳ, ಸಂಸದರಾದ ಬ್ರಿಜೇಶ್ ಚೌಟ, ರಾಜ್ಯಸಭಾ ಸದಸ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಕಿಶೋರ್ ಬಿ.ಆರ್, ಎಸ್ ಭೋಜೇ ಗೌಡ, ಐವನ್ ಡಿಸೋಜ, ಕೆ. ಪ್ರತಾಪ್ ಸಿಂಹ ನಾಯಕ್, ಡಾ.ಧನಂಜಯ ಸರ್ಜಿ, ಸುಳ್ಯ ತಹಶೀಲ್ದಾರ್ ಮಂಜುಳಾ ಎಂ, ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ, ದ.ಕ. ಜಿಲ್ಲಾ ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಧನಂಜಯ ಅಡಂಗಾಯ, ಅರೆಭಾಷೆ ಅಕಾಡೆಮಿಯ ಪೂರ್ವಾಧ್ಯಕ್ಷರಾದ ಪಿ.ಸಿ. ಜಯರಾಮ್ ಹಾಗೂ ಲಕ್ಷ್ಮೀನಾರಾಯಣ ಕಜೆಗದ್ದೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಲಯನ್ಸ್ ಮಾಜಿ ರಾಜ್ಯಪಾಲರಾದ ಎಂ.ಬಿ. ಸದಾಶಿವ ಅವರು ಸಮಾರೋಪ ಮಾತುಗಳನ್ನಾಡಲಿದ್ದಾರೆ.
ಸಮಾರಂಭದಲ್ಲಿ
ಪ್ರದೇಶದ ಹಿರಿಯ ಅರೆಭಾಷಿಕ ದಂಪತಿ, ಕೃಷಿ ಹಾಗೂ ಹೈನುಗಾರಿಕಾ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ, ಸಹಕಾರ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ
ಗಡಿನಾಡ ಉತ್ಸವದ ಅಂಗವಾಗಿ ಇದೀಗಾಗಲೇ ನವೆಂಬರ್ 18 ರಂದು ವಿವಿಧ ಸ್ಪರ್ಧೆಗಳನ್ನೊಳಗೊಂಡ ಕ್ರೀಡಾಕೂಟ ನಡೆದಿದೆ. ನವೆಂಬರ್ 24 ರಂದು ಸಾಂಸ್ಕೃತಿಕ ಸ್ಪರ್ಧೆಗಳು ನಡೆದಿದೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ‘ದಶವರ್ಷ ಸಂಭ್ರದ’ ಸ್ಮರಣಾರ್ಥ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅರೆಭಾಷಿಕರು ಇರುವ ಗಡಿಪ್ರದೇಶಗಳಲ್ಲಿ ಅರೆಭಾಷೆಯ ಉಳಿವಿಗಾಗಿ ಮತ್ತು ಅವರ ಬಾಂಧವ್ಯವನ್ನು ವೃದ್ಧಿಸಿ ಅರೆಭಾಷೆ ಬೆಳೆಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅರೆಭಾಷೆ ಗಡಿನಾಡ ಉತ್ಸವಗಳನ್ನು ಹಮ್ಮಿಕೊಳ್ಳಲಾಗುತಿದೆ ಎಂದು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.